ಮೇಕೇರಿ ಗ್ರಾಮ‌ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಜೆಡಿಎಸ್ ಸೇರ್ಪಡೆ

ಮೇಕೇರಿ ಗ್ರಾಮ‌ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಜೆಡಿಎಸ್ ಸೇರ್ಪಡೆ
ಜೆಡಿಎಸ್ ಸೇರ್ಪಡೆಗೊಂಡ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್

ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮೇಕೇರಿ ಗ್ರಾಮ ಪಂಚಾಯಿತಿ ಬಿಳಿಗೇರಿ ವಾರ್ಡ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಪಕ್ಷೇತರ ಸದಸ್ಯನಾಗಿರುವ ಎ.ಅಬ್ದುಲ್ ಖಾದರ್ ಅವರು,ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಎಂ ಷರೀಫ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

 ಸುಂಟಿಕೊಪ್ಪ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ‌ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಎಂ ಷರೀಫ್ ಅವರು,ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ತನ್ನ ಹಳೆಯ ಗತವೈಭವಕ್ಕೆ ಮರಳುತ್ತಿದೆ.ಮುಂದಿನ ದಿನಗಳಲ್ಲಿ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರುಗಳು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ. ಮಾಜಿ‌‌‌ ಮುಖ್ಯಮಂತ್ರಿ ಹಾಗೂ ಹಾಲಿ‌ ಕೇಂದ್ರ ಸಚಿವ ಎಚ್.ಡಿ‌ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ‌ಮೆಚ್ಚಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದತ್ತ ಜನರು ಒಲವು ವ್ಯಕ್ತಪಡಿಸುತ್ತಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಯ ಸಮಾವೇಶ ಸದ್ಯದಲ್ಲೇ ನಡೆಯಲಿದೆ.2028ರಲ್ಲಿ ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಎಂ.ಎಂ ಷರೀಫ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಶಿರ್ ಮೂರ್ನಾಡು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ‌ಒಬ್ಬ ಅಲ್ಪಸಂಖ್ಯಾತ ಮುಖಂಡರಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ನೀಡಿಲ್ಲ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸುವ ಪ್ರವೃತ್ತಿ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ಜಾಶಿರ್ ಮೂರ್ನಾಡು ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಜಿನಾಸುದ್ದೀನ್ ಮಾತನಾಡಿ, ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅತೀ ಹೆಚ್ಚು ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಲಿದ್ದು,ಜಿಲ್ಲೆಯಲ್ಲಿ ಜೆಡಿಎಸ್ ಮತ್ತಷ್ಟು ಪ್ರಭಾವಿಯಾಗಿ ಕೆಲಸ ಮಾಡಲಿದೆ.ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ.ಕೇವಲ ಮತಕ್ಕಾಗಿ ಮಾತ್ರ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಬಳಸುತ್ತಿದೆ ಎಂದು ಜಿನಾಸುದ್ದೀನ್ ಹೇಳಿದರು.

 ಜೆಡಿಎಸ್ ಸೇರ್ಪಡೆಯಾಗಿ‌ ಮಾತನಾಡಿದ‌ ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯ ಎ.ಅಬ್ದುಲ್ ಖಾದರ್,ನನ್ನ ವಾರ್ಡ್ ನಲ್ಲಿ ಅಭಿವೃದ್ಧಿ ಕೆಲಸಗಳಿಗೆ‌ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಅನುದಾನವನ್ನು ನೀಡದೆ,ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ ಎರಡು ವರ್ಷದಿಂದ ನನ್ನ ವಾರ್ಡ್ ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ‌ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಅನುದಾನವನ್ನು ತರುವ ಉದ್ದೇಶವನ್ನು ಹೊಂದಿದ್ದು,ಮುಂದಿನ ತಿಂಗಳು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕ ನಿಯೋಗವು ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿದ್ದೇವೆ ಎಂದು ಎ.ಅಬ್ದುಲ್ ಖಾದರ್ ಹೇಳಿದರು.

ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕು‌ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಶ್ರಫ್, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಿಯಾಬುದ್ದೀನ್ ವಿ.ಪಿ.ಎಸ್, ವಿರಾಜಪೇಟೆ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಇದ್ದರು.