ಮೇಕೇರಿ: ಬಿಳಿಗೇರಿ ಗ್ರಾಮದ ವಾರ್ಡ್ 2ರಲ್ಲಿ ನಿರಾಶ್ರಿತರಿಗೆ ನಿರ್ಮಿಸಲಾದ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

Nov 22, 2025 - 16:38
 0  179
ಮೇಕೇರಿ: ಬಿಳಿಗೇರಿ ಗ್ರಾಮದ ವಾರ್ಡ್ 2ರಲ್ಲಿ ನಿರಾಶ್ರಿತರಿಗೆ ನಿರ್ಮಿಸಲಾದ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ: ಮೇಕೇರಿ ಗ್ರಾಮ ಪಂಚಾಯಿತಿಯ ಬಿಳಿಗೇರಿ ಗ್ರಾಮದ ವಾರ್ಡ್ ನಂ.2ರಲ್ಲಿ ನಿರಾಶ್ರಿತರಿಗೆ ಸರ್ಕಾರದಿಂದ ಕಟ್ಟಿಕೊಡಲಾದ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಾರ್ಡ್‌ನ ಸದಸ್ಯ ಎ.ಅಬ್ದುಲ್ ಖಾದರ್ ಎಚ್ಚರಿಸಿದರು.

ಮಳೆಹಾನಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ಐದು ವರ್ಷಗಳೇ ಕಳೆದಿದೆ. ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರು ಒದಗಿಸಿಲ್ಲ. ಇರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಮುಂದಿನ 3 ದಿನಗಳೊಳಗೆ ಕುಡಿಯುವ ನೀರನ್ನು ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಎದುರು ನಿವಾಸಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

2018 ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಡಿಕೇರಿ ನಗರಸಭಾ ವ್ಯಾಪ್ತಿಯ ಇಂದಿರಾ ನಗರದ 22 ಕುಟುಂಬಗಳನ್ನು ಬಿಳಿಗೇರಿ ಗ್ರಾಮದ ವಾರ್ಡ್ ಸಂಖ್ಯೆ 2ಕ್ಕೆ ಸ್ಥಳಾಂತರಿಸಲಾಯಿತು. ಈ ಕುಟುಂಬಗಳಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿ ಕೊಟ್ಟಿದೆಯಾದರೂ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಕೊಳವೆ ಬಾವಿಯೊಂದರ ನೀರನ್ನು ಟ್ಯಾಂಕ್‌ಗೆ ಸಂಗ್ರಹಿಸಿ ಸರಬರಾಜು ಮಾಡಲಾಗುತ್ತಿದೆಯಾದರೂ ಗಡುಸಾದ ಈ ನೀರು ಕುಡಿಯಲು ಮತ್ತು ಇತರ ಯಾವುದೇ ಕೆಲಸಗಳಿಗೆ ಯೋಗ್ಯವಾಗಿಲ್ಲ. ಹಗಲು ಕೆಲಸ ಮುಗಿಸಿ ಬರುವ ನಿವಾಸಿಗಳು ಸಂಜೆಯ ನಂತರ ಪಕ್ಕದ ತೋಟದ ಬಾವಿಯಿಂದ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಇದೆ ಎಂದರು.

ಮೂಡ ಅನುಮತಿ ಪಡೆಯದೆ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಬಗ್ಗೆ ಇದೇ ಸಂದರ್ಭ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ ಸದಸ್ಯ ಎ.ಎ.ಅಬ್ದುಲ್ ಖಾದರ್ ಅವರು ಸರಕಾರ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಹೊಸ ನಿಯಮದ ಸುತ್ತೋಲೆ ತೋರಿಸಿ ವಿದ್ಯುತ್ ಸಂಪರ್ಕಕ್ಕೆ ಎನ್‌ಒಸಿ ನೀಡಲು ಸಾಧ್ಯವಿಲ್ಲವೆಂದು ಗ್ರಾ.ಪಂ ಪಿಡಿಒ ಹೇಳುತ್ತಿದ್ದಾರೆ.

ಸರಕಾರದ ಈ ಕ್ರಮದಿಂದ ಗ್ರಾಮದ ಸುಮಾರು 28 ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ವಾರ್ಡ್ ಸಂಖ್ಯೆ 2ರ ಮಳೆಹಾನಿ ಸಂತ್ರಸ್ತ ಮಹಿಳೆಯರಾದ ಬಿ.ಪಿ.ಹೇಮಾವತಿ, ಎ.ದೀಪಿಕಾ, ಟಿ.ವಿ.ನಿರ್ಮಾಲ, ಕೆ.ಜಿ.ನಿರ್ಮಲ, ಎಂ.ಎಲ್.ಬೇಬಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0