ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

Dec 5, 2025 - 10:25
 0  556
ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
Photo credit: TV09 (ಸಾಂದರ್ಭಿಕ ಚಿತ್ರ)

ಬೆಂಗಳೂರು, ಡಿ. 5: ಕೆಂಗೇರಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಹಳಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಬೆಳಗ್ಗೆ 8.15ರ ಸುಮಾರಿಗೆ ವ್ಯಕ್ತಿಯೊಬ್ಬರು ಹಳಿಗೆ ಜಿಗಿದ ಪರಿಣಾಮ ಮೈಸೂರು ರಸ್ತೆ–ಚಲ್ಲಘಟ್ಟ ನಡುವಿನ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು.

ಘಟನೆ ನಂತರ ಮೆಟ್ರೋ ಸುರಕ್ಷತಾ ಸಿಬ್ಬಂದಿ ಮತ್ತು ಕೆಂಗೇರಿ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದರು. ಹಳಿಗೆ ಜಿಗಿದ ವ್ಯಕ್ತಿಯನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮೂಲದ ಶಾಂತಗೌಡ (25) ಎಂದು ಗುರುತಿಸಲಾಗಿದೆ. ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬಿಎಂಆರ್‌ಸಿಎಲ್ ಸಾಮಾಜಿಕ ಜಾಲ ತಾಣ ಎಕ್ಸ್ ಮೂಲಕ ನೀಡಿರುವ ಪ್ರಾಥಮಿಕ ಮಾಹಿತಿಯಲ್ಲಿ, “ಮೈಸೂರು ರಸ್ತೆ–ಚಲ್ಲಘಟ್ಟ ನಡುವೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ತಿಳಿಸಿದೆ. ಪೊಲೀಸರು ಪರಿಶೀಲನೆ ನಡೆಸಿದ ಬಳಿಕವೇ ರೈಲು ತೆರವು ಕಾರ್ಯ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಚಲ್ಲಘಟ್ಟ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ಟರ್ಮಿನಲ್, ಪಂತರಪಾಳ್ಯ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ನೇರಳೆ ಮಾರ್ಗದ ರೈಲುಗಳು ಸದ್ಯ ಸಂಚರಿಸುತ್ತಿಲ್ಲ. ವೈಟ್‌ಫೀಲ್ಡ್‌ನಿಂದ ಮೈಸೂರು ರಸ್ತೆಯವರೆಗೆ ಮಾತ್ರ ಸಂಚಾರ ಎಂದಿನಂತೆಯೇ ಮುಂದುವರಿದಿದೆ.

ಬೆಂಗಳೂರು ಮೆಟ್ರೋ ಮಾರ್ಗದಲ್ಲಿ ಆತ್ಮಹತ್ಯೆ ಪ್ರಯತ್ನಗಳ ಘಟನೆ ಇದೇ ಮೊದಲಲ್ಲ. ಕಳೆದ ಅಕ್ಟೋಬರ್‌ನಲ್ಲಿ ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದ ಹಸಿರು ಮಾರ್ಗದಲ್ಲಿ ಡಿ ಗ್ರೂಪ್ ನೌಕರ ವೀರೇಶ್ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆ ವೇಳೆ ಪಾರು ಮಾಡಲಾಗಿತ್ತು.

ಕೆಂಗೇರಿ ಘಟನೆಯ ಪರಿಣಾಮವಾಗಿ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 2
Sad Sad 1
Wow Wow 0