ಮಂಗಳೂರು | ಉಪ್ಪಳ ಗೇಟ್ ಬಳಿ ತಲವಾರು ದಾಳಿ, ರೌಡಿ ನೌಫಲ್‌ ಹತ್ಯೆ

Nov 1, 2025 - 19:47
 0  1.7k
ಮಂಗಳೂರು | ಉಪ್ಪಳ ಗೇಟ್ ಬಳಿ ತಲವಾರು ದಾಳಿ, ರೌಡಿ ನೌಫಲ್‌ ಹತ್ಯೆ
ಫೋಟೋ: ನೌಫಲ್

ಮಂಗಳೂರು, ನ.1: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಗಂಭೀರ ಅಪರಾಧಗಳಲ್ಲಿ ಬೇಕಾಗಿದ್ದ ನಟೋರಿಯಸ್ ರೌಡಿ ಟೋಪಿ ನೌಫಲ್‌ (38) ಎಂಬಾತನನ್ನು, ಕೇರಳದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿ ಶನಿವಾರ ಬೆಳಗ್ಗೆ ಅಪರಿಚಿತರು ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಜಾಲ್ ಫೈಸಲ್ ನಗರ ಮೂಲದ ನೌಫಲ್‌, ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡ ಬಳಿಕ ಕಾಸರಗೋಡು ಭಾಗದಲ್ಲಿ ಸಕ್ರಿಯನಾಗಿದ್ದನೆಂದು ತಿಳಿದುಬಂದಿದೆ. ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ, ಕರೆಸಿಕೊಂಡ ಅಪರಿಚಿತರು ತಲವಾರುಗಳಿಂದ ದಾಳಿ ನಡೆಸಿ ಆತನ ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ.

ರೈಲ್ವೇ ಟ್ರ್ಯಾಕ್ ಪಕ್ಕದಲ್ಲೇ ಶವ!

ಘಟನೆ ಬಳಿಕ ರೈಲ್ವೇ ಟ್ರ್ಯಾಕ್ ಹತ್ತಿರ ಶವ ಪತ್ತೆಯಾಗಿದ್ದು, ತಲೆಗೆ ಹಾಗೂ ಕುತ್ತಿಗೆಗೆ ತೀವ್ರವಾಗಿ ಕಡಿದ ಗುರುತುಗಳು ಕಂಡುಬಂದಿವೆ. ದೇಹದ ಮೇಲೆ ಬನಿಯಾನ್ ಮತ್ತು ಪ್ಯಾಂಟ್ ಮಾತ್ರ ಇದ್ದು, ಹೋರಾಟ ಸಮಯದಲ್ಲಿ ಶರ್ಟ್ ಎಳೆದುಕೊಂಡು ಹೋಗಿರುವ ಸಾಧ್ಯತೆಯಿದೆ. ನೌಫಲ್‌ ಸ್ಕೂಟರ್‌ನಲ್ಲಿ ಸ್ಥಳಕ್ಕೆ ತೆರಳಿದ್ದಾನೆ ಎನ್ನಲಾಗಿದೆ.

ಮಂಜೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಕಾಸರಗೋಡಿನ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ನೌಫಲ್‌ ಮಂಗಳೂರಿನಲ್ಲಿ ಡ್ರಗ್ಸ್ ವಹಿವಾಟು, ಹಫ್ತಾ ವಸೂಲಿ, ಕೊಲೆಯತ್ನ, ಅಕ್ರಮ ಚಿನ್ನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಮತ್ತೋರ್ವನ ಡಬಲ್ ಮರ್ಡರ್ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಆ ಸಮಯದಲ್ಲಿ ಮಾರಿಪಳ್ಳದ ಜಬ್ಬಾರ್–ತಲ್ಲತ್ ಗ್ಯಾಂಗ್ ಗೆ ಹತ್ತಿರವಾಗಿದ್ದ. ನಂತರ ಆ ಗ್ಯಾಂಗ್ ನಿಷ್ಕ್ರಿಯವಾದ ನಂತರ, ನೌಫಲ್‌ ಸ್ವಂತ ತಂಡ ಕಟ್ಟಿಕೊಂಡು ಕಂಕನಾಡಿ, ವಾಮಂಜೂರು, ಕಾವೂರು, ಸುರತ್ಕಲ್ ಸೇರಿ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.

What's Your Reaction?

Like Like 2
Dislike Dislike 1
Love Love 0
Funny Funny 0
Angry Angry 0
Sad Sad 4
Wow Wow 2