ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ ಕಾರ್ಯಕ್ರಮ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ನಾಪೋಕ್ಲುವಿನ ಅಲ್ ನೂರ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನಾ ಸಮಾರಂಭ ಹಾಗೂ ದಅವಾ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
ನಾಪೋಕ್ಲುವಿನ ಬೇತು ರಸ್ತೆಯಲ್ಲಿ ನಿರ್ಮಿಸಲಾದ ನೂತನ ಮಸೀದಿಯಲ್ಲಿ ಬುಧವಾರ ಆಝಾನ್ ಮೊಳಗಿಸಿ ಅಸರ್ ನಮಾಝ್ ನಿರ್ವಹಿಸುವ ಮೂಲಕ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್ ಅಧ್ಯಕ್ಷರಾದ ಪಿ.ಎನ್.ಅಬ್ದುಲ್ ಲತೀಫ್ ಮದನಿ ಅವರು ನೂತನ ಮಸೀದಿಯನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಲತೀಫ್ ಮದನಿ ಅವರು ಮಾತನಾಡಿ ಮಸೀದಿಗಳು ಅಲ್ಲಾಹನ ಆರಾಧನ ಕೇಂದ್ರವಾಗಿದ್ದು ನಮಾಝ್ ನಿರ್ವಹಿಸುವ ಮೂಲಕ ದೈವಾರಾಧನೆಯೊಂದಿಗೆ ಮನುಷ್ಯನನ್ನು ಸಮಾಜದಲ್ಲಿ ಉತ್ತಮವ್ಯಕ್ತಿಯಾಗಿ ಪರಿವರ್ತಿಸುವ ಪವಿತ್ರ ಕೇಂದ್ರವಾಗಿದೆ.
ಲೋಕದಲ್ಲಿ ಹಲವಾರು ಧರ್ಮ ಜನಾಂಗದ ಜನರಿದ್ದು ಅವರೆಲ್ಲ ಅವರ ವಿಶ್ವಾಸದ ದೈವಗಳನ್ನು ಆರಾಧಿಸುತ್ತಾರೆ. ಆದರೆ ಮುಸಲ್ಮಾನರು ಏಕದೈವ ವಿಶ್ವಾಸಿಗಳಾಗಿದ್ದು ಪವಿತ್ರ ಗ್ರಂಥ ಖುರಾನ್ ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರಾಗಿದ್ದಾರೆ.
ದೇಶದ ನಾನ ಭಾಗಗಳಲ್ಲಿ ತೌಹೀದಿನ ಮಸೀದಿಗಳು ನಿರ್ಮಾಣವಾಗಿದ್ದು ಅದರಂತೆ ಇಲ್ಲಿಯೂ ಕೂಡ ನೂತನ ಮಸೀದಿಯನ್ನು ನಿರ್ಮಾಣಮಾಡಲಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಡಾ. ಸಣ್ಣುವವಂಡ ಕಾವೇರಪ್ಪ ಅವರು ಮಾತನಾಡಿ ವಿವಿಧ ಧರ್ಮಗಳ ಜನಾಂಗದವರು ವಾಸಿಸುವ ನಮ್ಮ ದೇಶದಲ್ಲಿ ಮುಸ್ಲಿಂ ಸಮುದಾಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಸ್ಲಿಂ ಸಮುದಾಯದ ಜನರು ಬಡತನದಿಂದ ಈ ಹಿಂದೆ ಶೈಕ್ಷಣಿಕವಾಗಿ ಹಿಂದೆ ಸರಿದಿದ್ದರು. ಇದರಿಂದ ಸಮುದಾಯದ ಹಿಂಜರಿಕೆಗೆ ಕಾರಣವಾಗಿತ್ತು.ಆದರೆ ಈಗ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯನ್ನು ಹೊಂದಿದ್ದು ದೇಶ ವಿದೇಶದ ವಿವಿಧ ಕಡೆಗಳಲ್ಲಿ ವಿವಿಧ ಶೈಕ್ಷಣಿಕ ಕೇಂದ್ರಗಳನ್ನು ಒಳಗೊಂಡು ಉನ್ನತ ಸ್ಥಾನಕ್ಕೆ ಏರುತ್ತಿರುವುದು ಶ್ಲಾಘನೀಯ.ಧಾರ್ಮಿಕ ಪಠಣ ದೊಂದಿಗೆ ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿಸಲು ಪೋಷಕರು ಶ್ರಮ ಪಡಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಖಲೀಲ್ ತಲಪ್ಪಾಡಿಯವರು ಮುಖ್ಯ ಪ್ರಭಾಷಣ ನಡೆಸಿದರು. ಮೌಲವಿ ಶಿಹಾಬ್ ಎಡಕ್ಕರ ಹಾಗೂ ಮುನೀರ್ ಶರಫಿ ಅವರ ನೇತೃತ್ವದಲ್ಲಿ ತೌಹಿದ್ ಹಾಗೂ ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ದಅವಾ ಸಮ್ಮೇಳನ ನಡೆಯಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪಿ.ಎಂ. ಖಾಸಿಂ,ಮೊಹಮ್ಮದ್ ಕುಂಞಿಸುಳ್ಯ, ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಆಸಿಫ್ ಅಲಿ, ಸಮಿತಿ ಸದಸ್ಯರಾದ ಹಸೈನಾರ್, ಮೊಹಮ್ಮದ್ ಹಾಜಿ, ಅಬ್ದುಲ್ ಖಾದರ್, ಅಬ್ದುಲ್ಲಾ, ಹಂಝ, ಮೂಸ, ಹಾರಿಫ್, ಮನ್ಸೂರ್, ನೌಫಲ್, ಜೈಸಲ್, ರಹೀಮ್, ಖಾತಿಮ್, ಸೇರಿದಂತೆ ಮತ್ತಿತರ ಪ್ರಮುಖರುಹಾಜರಿದ್ದರು. ಕಾರ್ಯಕ್ರಮದಲ್ಲಿ ನಿಶಾದ್ ಸ್ವಲಾಹಿ ಸ್ವಾಗತಿಸಿ, ಸರ್ವರನ್ನು ವಂದಿಸಿದರು.