ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಅರ್ಥಪೂರ್ಣ ವನ ಮಹೋತ್ಸವ ಆಚರಣೆ

Jul 18, 2026 - 09:17
 0  76
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಅರ್ಥಪೂರ್ಣ ವನ ಮಹೋತ್ಸವ ಆಚರಣೆ

ಪೊನ್ನಂಪೇಟೆ: ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸುಸ್ಥಿರ ಪರಿಸರ ನಿರ್ವಹಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ವನ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

 ಕೃಷಿ ವಿಶ್ವವಿದ್ಯಾಲಯ (ಯುಎಎಸ್) ಮಂಡ್ಯ ವ್ಯಾಪ್ತಿಯ ಅರಣ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಹಾವಿದ್ಯಾಲಯದ ನರ್ಸರಿ ಚೌಗು ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚೌಗು ಪ್ರದೇಶಗಳ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಪುನರುಜ್ಜೀವನ ಇಂದಿನ ಅಗತ್ಯವಾಗಿದೆ. ಸ್ಥಳೀಯ ಪರಿಸರಕ್ಕೆ ಹೊಂದುವ ಸ್ವದೇಶಿ ಮರಗಳ ಜಾತಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ನೆಡುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ 'ಏಕ್ ಪೇಡ್ ಮಾಂ ಕೆ ನಾಮ್' ಅಭಿಯಾನದ ಅಂಗವಾಗಿ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಎಸ್ಸಿ. ಅರಣ್ಯ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ತಲಾ ಒಂದು ಸಸಿ ನೆಡುವ ಮೂಲಕ ವನ ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ವಲಯದ ಅರಣ್ಯಾಧಿಕಾರಿ ನಿವೇದಿತಾ, ಅರಣ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ವಿಜಯ್ ಕುಮಾರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0