ಮಾಧ್ಯಮ ಸ್ಪಂದನದಿಂದ ಮಹಿಳೆಗೆ ಚಿಕಿತ್ಸೆಗೆ ನೆರವು

Feb 14, 2026 - 10:29
 0  132
ಮಾಧ್ಯಮ ಸ್ಪಂದನದಿಂದ ಮಹಿಳೆಗೆ ಚಿಕಿತ್ಸೆಗೆ ನೆರವು

ಮಡಿಕೇರಿ;ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಸೀನ ಅವರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿದ್ದರಿಂದ ಅವರು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶೇ.75 ರಷ್ಟು ಅಂಗವೈಕಲ್ಯ ಹೊಂದಿರುವ ಹಸೀನ ಆರೋಗ್ಯ ಸಮಸ್ಯೆಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದರು.

ಆರ್ಥಿಕ ಸಮಸ್ಯೆ ಹಾಗೂ ಮಾರ್ಗದರ್ಶನ ಕೊರತೆಯಿಂದ ಚಿಕಿತ್ಸೆ ಪಡೆಯದೇ ಮನೆಯಲ್ಲಿ ನೋವಿನಲ್ಲಿ ದಿನ ಕಳೆಯುತ್ತಿದ್ದರು. ಚಿಕಿತ್ಸೆಗೆ ಸಹಾಯ ಮಾಡುವಂತೆ ಹಸೀನ ಲಿಖಿತವಾಗಿ ಪಾಲಿಬೆಟ್ಟ ಚೆಶ್ಸೆರ್ ಹೋಮ್ ಮುಖ್ಯೋಪಾಧ್ಯಾಯರಾದ ಶಿವರಾಜ್ ಅವರ ಗಮನ ಸೆಳೆದಿದ್ದರು.

ಚಿಕಿತ್ಸೆಗೆ ಸಹಾಯ ಮಾಡುವಂತೆ ಅವರು ಮಾಧ್ಯಮ ಸ್ಪಂದನ ತಂಡದ ಪುತ್ತಂ ಪ್ರದೀಪ್ ಬಾಲನ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಮಾಧ್ಯಮ ಸ್ಪಂದನ ಕೋರಿಕೆ ಅನ್ವಯ ಜೀವ ರಕ್ಷಕ ಚೋಕಂಡ ಸಂಜು ಸುಬ್ಬಯ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ವಿರಾಜಪೇಟೆಯಿಂದ ಮಂಗಳೂರು ಆಸ್ಪತ್ರೆಗೆ ಹಸೀನ ಅವರನ್ನು ಕರೆದುಕೊಂಡು ಹೋಗಲು ಎಸ್.ಕೆ ಎಸ್.ಎಸ್.ಎಫ್ ಸಿದ್ದಾಪುರ ಶಾಖೆಯಿಂದ ಉಚಿತವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

 ಎಸ್.ಕೆ.ಎಸ್.ಎಸ್.ಎಫ್ ಖಜಾಂಚಿ ಇಂಜಿಲಗೆರೆ ಎನ್.ಎ. ನೌಶಾದ್ ಹೆಚ್ಚಿನ ಮುತುವರ್ಜಿ ವಹಿಸಿ ವಿರಾಜಪೇಟೆಗೆ ಖುದ್ದು ಆಗಮಿಸುವುದರ ಮೂಲಕ ಹಸೀನ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದರು. ಈ ಸಂದರ್ಭದಲ್ಲಿ ನೌಶಾದ್ ವೈಯುಕ್ತಿಕ ನೆರವು ಕೂಡ ಒದಗಿಸಿ ಮಾನವೀಯತೆ ಮೆರೆದಿದ್ದರು. ಮಂಗಳೂರಿಗೆ ಹಸೀನ ಅವರೊಂದಿಗೆ ಸ್ನೇಹಿತೆ ಭಾಗ್ಯ ತಮ್ಮ ಪತಿಯೊಂದಿಗೆ ತೆರಳುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

 ಮಂಗಳೂರು ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕ ಸಾಧಿಸುವುದರೊಂದಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಚೋಕಂಡ ಸಂಜು ಸುಬ್ಬಯ್ಯ ನೋಡಿಕೊಂಡಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಹಸೀನ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತನ್ನ ಚಿಕಿತ್ಸೆಗೆ ಸಹಕರಿಸಿದ ಚೋಕಂಡ‌ ಸಂಜು ಸುಬ್ಬಯ್ಯ, ಪುತ್ತಂ ಪ್ರದೀಪ್ ಬಾಲನ್, ಇಂಜಿಲಗೆರೆ ನೌಶಾದ್, ಸ್ನೇಹಿತೆ ಭಾಗ್ಯ, ಮಂಗಳೂರು ವೆನ್ಲಾಕ್ ಆಸ್ಪತ್ರೆ ವೈದ್ಯರು- ಸಿಬ್ಬಂದಿಗೆ ಕೃತಜ್ಞತೆ ಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಹಸೀನ‌ ಚಿಕಿತ್ಸೆಗೆ ಅಗತ್ಯ ಸಹಾಯ ಮಾಡಿದ ಎಲ್ಲರಿಗೂ ಟೀಮ್ ಮಾಧ್ಯಮ ಸ್ಪಂದನದ ಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಧನ್ಯವಾದ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0