ಪುತ್ರಿಯ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Nov 20, 2025 - 12:14
Nov 20, 2025 - 12:15
 0  1.5k
ಪುತ್ರಿಯ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಪೂಜೆಯ ನೆಪದಲ್ಲಿ ಮಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದ ತಾಯಿ, ಮಗಳ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ ನಂತರ, ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

ಈ ಕೃತ್ಯಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.ಆನೇಕಲ್ ಮೂಲದ ರಮ್ಯಾ (25) ಗಂಭೀರ ಗಾಯಗೊಂಡಿದ್ದು, ಅವರ ತಾಯಿ ಸುಜಾತಾ (49) ಕೂಡ ಕುತ್ತಿಗೆ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗ್ರಹಾರ ಲೇಔಟ್‌ನಲ್ಲಿ ವಾಸಿಸುತ್ತಿದ್ದ ಸುಜಾತಾ, ಮಾನಸಿಕವಾಗಿ ನೊಂದಿದ್ದ ಪುತ್ರಿ ರಮ್ಯಾ ಅವರನ್ನು ಮುಂಜಾನೆ ನಾಲ್ಕು ಗಂಟೆ ವೇಳೆಗೆ ಹರಿಹರೇಶ್ವರ ದೇವಸ್ಥಾನಕ್ಕೆ ಪೂಜೆಗೆ ಕರೆದುಕೊಂಡು ಹೋಗಿದ್ದು, ದೇವರ ಸನ್ನಿಧಿಯಲ್ಲಿ ಪೂಜೆಯ ನೆಪವೊಡ್ಡಿದ ತಾಯಿ, ತನ್ನ ಬಳಿ ತಂದಿದ್ದ ಮಾರಕಾಸ್ತ್ರದಿಂದ ಪುತ್ರಿಯ ಕುತ್ತಿಗೆಗೆ ಇರಿದು ಹತ್ಯೆಗೆ ಯತ್ನಿಸಿದರು.

ರಮ್ಯಾ ರಕ್ತಸ್ರಾವವಾಗುತ್ತಿರುವುದನ್ನು ಕಂಡು ತಾನೂ ಹೆದರಿ, ಇದೇ ಶಸ್ತ್ರದಿಂದ ತನ್ನ ಕತ್ತು ಕೊಯ್ದುಕೊಂಡು ಸ್ಥಳದಿಂದ ಹೊರಟ ಸುಜಾತಾ, ದೇವಸ್ಥಾನ ಸಮೀಪದಲ್ಲೇ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ನಂತರ ಪತ್ತೆಯಾಯಿತು.

ಐದು ವರ್ಷಗಳ ಹಿಂದೆ ರಮ್ಯಾ ಅವರನ್ನು ಆನೇಕಲ್‌ ನ ಸೋಮಶೇಖರ್‌ಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರೂ, ಇಬ್ಬರೂ ಅಕಾಲಿಕವಾಗಿ ಮೃತಪಟ್ಟಿದ್ದರು. ಈ ದುರಂತದಿಂದ ರಮ್ಯಾ ಗಂಭೀರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ, ಸುಜಾತಾ ಕೂಡ ಇದೇ ಕಾರಣದಿಂದ ಮನಸ್ತಾಪಕ್ಕೊಳಗಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

“ಘಟನೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಸುಜಾತಾ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಲಾಗುತ್ತದೆ. ನಂತರ ಮಾತ್ರ ಘಟನೆಗೆ ಕಾರಣಗಳೇನು ಎಂಬುದು ಸ್ಪಷ್ಟವಾಗಲಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0