ಮಗು ಬೇಕಾದರೆ ಚಿಕ್ಕ ಮಗನ ಬಳಿ ಹೋಗು ಎನ್ನುತ್ತಿದ್ದ ಅತ್ತೆ ಮಾವ!: ಪತಿ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ನೀರಿಗೆ ಹಾರಿ ಪ್ರಾಣಬಿಟ್ಟ ಉಪನ್ಯಾಸಕಿ

Oct 20, 2025 - 17:39
 0  2.6k
ಮಗು ಬೇಕಾದರೆ ಚಿಕ್ಕ ಮಗನ ಬಳಿ ಹೋಗು ಎನ್ನುತ್ತಿದ್ದ ಅತ್ತೆ ಮಾವ!: ಪತಿ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ನೀರಿಗೆ ಹಾರಿ ಪ್ರಾಣಬಿಟ್ಟ ಉಪನ್ಯಾಸಕಿ

ದೇವನಹಳ್ಳಿ, ಅ. 20: ಪತಿ ಮತ್ತು ಅತ್ತೆಮಾವನಿಂದ ನಿರಂತರ ಕಿರುಕುಳ ಅನುಭವಿಸಿದ ಉಪನ್ಯಾಸಕಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್‌ನಲ್ಲಿ ನಡೆದಿದೆ.

ಮೃತರನ್ನು ಪುಷ್ಪಾವತಿ (30) ಎಂದು ಗುರುತಿಸಲಾಗಿದೆ. ಕೇವಲ 11 ತಿಂಗಳ ಹಿಂದೆ ತಪಸ್ಸಿಹಳ್ಳಿಯ ವೇಣು ಎಂಬವರೊಂದಿಗೆ ವಿವಾಹವಾಗಿದ್ದ ಪುಷ್ಪಾವತಿಗೆ ಮದುವೆಯ ನಂತರದಿಂದಲೇ ಪತಿ ಮನೆಯಲ್ಲಿ ಹಿಂಸೆ ಆರಂಭವಾಗಿತ್ತು ಎಂದು ತಿಳಿದುಬಂದಿದೆ. ವರದಕ್ಷಿಣೆ ಹಾಗೂ ನಿವೇಶನ ಕೊಡಿಸುವಂತೆ ಆಗಾಗ ಒತ್ತಾಯಿಸುತ್ತಿದ್ದ ಪತಿ ಮನೆಯವರು, ಪುಷ್ಪಾವತಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರೆಂದು ಆರೋಪಿಸಲಾಗಿದೆ.

ಆತ್ಮಹತ್ಯೆಗೆ ಮೊದಲು ಪುಷ್ಪಾವತಿ ವಿಡಿಯೋ ಮಾಡಿ, ತಾನು ಅನುಭವಿಸಿದ ಸಂಕಷ್ಟಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಪತಿ ಮನೆಯಲ್ಲಿ ನೀಡಲಾಗುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕುಟುಂಬಸ್ಥರು ಪುಷ್ಪಾವತಿ ನಾಪತ್ತೆಯಾಗಿದ್ದ ಕುರಿತು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಹುಡುಕಾಟ ನಡೆಸಿ, ಡ್ಯಾಮ್‌ನಲ್ಲಿ ಅವರ ಮೃತದೇಹ ಪತ್ತೆಹಚ್ಚಿದ್ದಾರೆ.

“ಮದುವೆಯಾದ ದಿನದಿಂದಲೇ ಗಂಡ ನನ್ನೊಂದಿಗೆ ಸರಿಯಾಗಿ ಸಂಸಾರ ನಡೆಸುತ್ತಿರಲಿಲ್ಲ. ಮಾತನಾಡುವುದಕ್ಕೂ ನಿರಾಕರಿಸುತ್ತಿದ್ದರು. ಮಗುವಿನ ವಿಚಾರ ಕೇಳಿದಾಗ ಬೈಯುತ್ತಿದ್ದರು. ಅವರಿಗೆ ಏನಾದರೂ ಆರೋಗ್ಯ ತೊಂದರೆ ಇದ್ದರೆ ಚಿಕಿತ್ಸೆ ಪಡೆಯೋಣ ಎಂದರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಹಲವಾರು ಬಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ಎದೆಗೆ ಒದ್ದ ಸಂದರ್ಭಗಳೂ ಇವೆ. ‘ಮಗು ಬೇಕಾದರೆ ನನ್ನ ಚಿಕ್ಕ ಮಗನ ಬಳಿಗೆ ಹೋಗು’ ಎಂದು ಅತ್ತೆಮಾವ ಹಾಸ್ಯಮಾಡುತ್ತಿದ್ದರು,” ಎಂದು ಪುಷ್ಪಾವತಿ ತನ್ನ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ 

ಅವರ ಹೇಳಿಕೆಯ ಪ್ರಕಾರ, 15 ದಿನಗಳ ಹಿಂದೆ ಪತಿ ಮತ್ತು ಮನೆಯವರು ಸೇರಿ ಪುಷ್ಪಾವತಿ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದರು. “ದೂರು ಕೊಟ್ಟರೆ ಮತ್ತೆ ಮನೆಗೆ ಬರಲು ಬಿಡುವುದಿಲ್ಲ” ಎಂದು ಮಾವ ಬೆದರಿಕೆ ಹಾಕಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.

ಪತಿ ಮನೆಯ ಕಿರುಕುಳವನ್ನು ತಡೆಯಲಾಗದೆ, ಹಲವು ಬಾರಿ ಪೊಲೀಸರ ಸಹಾಯ ಪಡೆಯಲು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ, ಪುಷ್ಪಾವತಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.

  ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 3
Sad Sad 8
Wow Wow 2