Kodagu

ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

admincoorgdaily

ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ   ಕೆಸರುಗದ್ದೆ ಕ್ರೀಡಾಕೂಟ

ಕುಶಾಲನಗರ, ಆ.23:ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರ ಲಯನ್ಸ್ ಕ್ಲಬ್ ನ ವತಿಯಿಂದ ಶಾಲೆಯ ಇಕೋ ಕ್ಲಬ್ ಮತ್ತು ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ ಶನಿವಾರ ( ಆ.22 ರಂದು ) ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರ ಬತ್ತದ ಗದ್ದೆಯಲ್ಲಿಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.   

ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು, ಆಟವಾಡುತ್ತಾ ಕುಣಿದು ಕುಪ್ಪಳಿಸಿ ಸಂತಸಪಟ್ಟರು. ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಲಯನ್ಸ್ ಕ್ಲಬ್ ನ ಅಧ್ಯಕ್ಷ ಕೆ.ಎನ್.ಪವನ್ ಕುಮಾರ್ ,

ರೈತರ ಕೃಷಿ ಜೀವನ ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಪರಿಚಯಿಸಲು ಮತ್ತು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಲು ಈ ವಿಶಿಷ್ಠ ಗ್ರಾಮೀಣ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.      

   ಇಂತಹ ಕ್ರೀಡಾಕೂಟಗಳಿಂದ ಮಕ್ಕಳಿಗೆ ರೈತರ ಜೀವನ ಹಾಗೂ ಕೃಷಿಪಾಠದ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬಹುದು.

ಇದು ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಕೆ.ಗೋಪಾಲಕೃಷ್ಣ,

ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಶಾಲೆಯ ವತಿಯಿಂದ ಸಂಘಟಿಸಲಾಗುತ್ತಿದ್ದು, ಈ ಕ್ರೀಡಾಕೂಟಕ್ಕೆ 

 ಲಯನ್ಸ್ ಕ್ಲಬ್ ವತಿಯಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದರು.

       ಜಿಲ್ಲಾ ಲಯನ್ಸ್ ಕ್ಲಬ್ ನ ಗ್ಲೋಬಲ್ ಸರ್ವಿಸ್ ವಿಭಾಗದ ಚೀಫ್ ಕೋರ್ಡಿನೇಟರ್

ಸುಮನ್ ಬಾಲಚಂದ್ರ ಮಾತನಾಡಿ, ಈ ಕ್ರೀಡೆಯು ಮಕ್ಕಳಲ್ಲಿ ಪರಸ್ಪರ ಭ್ರಾತೃತ್ವ ಬೆಳೆಸುವುದರೊಂದಿಗೆ ಅವರ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದರು.

ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಟಿ.ಕೆ.ರಾಜಶೇಖರ್ ಮಾತನಾಡಿ,ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಮಣ್ಣಿನೊಂದಿಗೆ ಸದಾ ಸಂಪರ್ಕ ಹೊಂದುವ ಮೂಲಕ ಕೃಷಿ ಚಟುವಟಿಕೆಗಳ ಅನುಭವ 

ಪಡೆಯಬೇಕು ಎಂದರು.ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಮಾತನಾಡಿ, ಗ್ರಾಮದಲ್ಲಿ ಕಳೆದ 5 ವರ್ಷಗಳಿಂದ ಸತತವಾಗಿ ಕೆಸರುಗದ್ದೆ ಕ್ರೀಡಾಕೂಟ ಸಂಘಟಿಸುತ್ತಿರುವುದರಿಂದ 

ಮಕ್ಕಳು ತಮ್ಮ‌ ಕಲಿಕೆಯೊಂದಿಗೆ ಕೃಷಿ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಈ ಕ್ರೀಡೆಯು ಮಕ್ಕಳ ಮನಸ್ಸಿಗೆ ಮುದ ನೀಡುವುದರೊಂದಿಗೆ ಅವರಿಗೆ ಕೃಷಿ ಅನುಭವ ನೀಡಲು ಸಹಕಾರಿಯಾಗಿದೆ ಎಂದರು.

ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಸಿ.ಜವರೇಗೌಡ ಮಾತನಾಡಿ, ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತವೆ ಎಂದರು.

ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ಮಾತನಾಡಿ, ಈ ಕ್ರೀಡಾಕೂಟವು ಮಕ್ಕಳಲ್ಲಿ ಹೊಸ ಚೈತನ್ಯ ಹಾಗೂ ಭರವಸೆ ಮೂಡಿಸುತ್ತದೆ ಎಂದರು.

     

ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ನಾರಾಯಣ್

ಮಾತನಾಡಿದರು.

ಲಯನ್ಸ್ ಕ್ಲಬ್ ಟ್ರಸ್ಟ್ ನ‌ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ,

ಲಯನ್ಸ್ ಕ್ಲಬ್ ನ ಉಪಾಧ್ಯಕ್ಷ 

ನಿತಿನ್ ಗುಪ್ತ, ಕಾರ್ಯದರ್ಶಿ 

 ಕಿರಣ್ ಗೌಡ , ಕೋಶಾಧಿಕಾರಿ ಡಾ ರಾಘವೇಂದ್ರ, ಪದಾಧಿಕಾರಿಗಳಾದ, ವೀಣಾ ಪವನ್ ಕುಮಾರ್ , ನವ್ಯ ಇತರರು ಇದ್ದರು. ಮಕ್ಕಳಿಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೆ.ಗೋಪಾಲಕೃಷ್ಣ , ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್,ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟರು.

: ಗಮನ ಸೆಳೆದ‌ ಕೆಸರುಗದ್ದೆ ಕ್ರೀಡಾಕೂಟ:

ಮಕ್ಕಳು ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಬೊಗಸೆಯಿಂದ ಲೋಟಕ್ಕೆ ಸ್ಪರ್ಧೆ ಸೇರಿದಂತೆ ಕೆಸರುಗದ್ದೆಯ ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.

ಶಾಲೆಯ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ಕೆಸರಿನ ಗದ್ದೆಗೆ ಇಳಿದು, ಒಬ್ಬರ ಮೇಲೊಬ್ಬರು ಕೆಸರು ಎರಚುತ್ತಾ ಖುಷಿ ಪಟ್ಟರು.

 ಕೆಸರುಗದ್ದೆಯ ವಾತಾವರಣ ವಿದ್ಯಾರ್ಥಿಗಳ ಕ್ರೀಡಾ ಉತ್ಸಾಹಕ್ಕೆ ಮತ್ತಷ್ಟು ಮೆರುಗು ನೀಡಿತು. ನಂತರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಕ್ಲಬ್ ನ ಅಧ್ಯಕ್ಷ ಕೆ.ಎನ್.ಪವನ್ ಕುಮಾರ್ ಮತ್ತು ವೀಣಾ ಪವನ್ ಕುಮಾರ್  ನಗದು ಬಹುಮಾನ ನೀಡಿ ಮಕ್ಕಳ ಕ್ರೀಡೆಗೆ ಪ್ರೋತ್ಸಾಹ ನೀಡಿದರು.

ಸನ್ಮಾನ: ಇದೇ ವೇಳೆಯಲ್ಲಿ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.