State News

ಮದುವೆಯಾದರೆ ನಿನ್ನನ್ನೇ ಎಂದಿದ್ದ ಪ್ರೇಮಿಯ ಹತ್ಯೆ! | ಐದು ವರ್ಷ ಲವ್ ಮಾಡಿ ಬೇರೆಯವನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡ ಹುಡುಗಿ

admincoorgdaily

ಹಾಸನ: “ಮದುವೆಯಾದರೆ ನಿನ್ನನ್ನೇ” ಎಂದು ಕನಸು ಕಂಡ ಯುವಕನ ಪ್ರೇಮಕಥೆ ದಾರುಣ ಅಂತ್ಯ ಕಂಡಿದೆ. ಲವ್ ಬ್ರೇಕಪ್ ಹಿನ್ನೆಲೆ ಯುವಕನನ್ನು ನಿಗೂಢವಾಗಿ ಹತ್ಯೆ ಮಾಡಿ ಅಪಘಾತ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಎಸ್. ಅಂಕನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಹೊಳೆನರಸೀಪುರದ ದಾಸಯ್ಯ ಹಾಗೂ ಗೀತಾ ದಂಪತಿಯ ಪುತ್ರ ಸುದೀಪ್ (24) ಎಂದು ಗುರುತಿಸಲಾಗಿದೆ.

 ಮೈಸೂರು ಮೂಲದ ಯುವತಿಯೊಂದರೊಂದಿಗೆ ಐದು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ ಸುದೀಪ್, ಆಕೆಯೇ ತನ್ನ ಜೀವನ ಸಂಗಾತಿ ಎನ್ನುತ್ತಿದ್ದ. ಆದರೆ ಇತ್ತೀಚೆಗೆ ಆಕೆಗೆ ಬೇರೆ ಮದುವೆ ನಿಶ್ಚಯವಾದ ವಿಷಯ ತಿಳಿದು ಸುದೀಪ್ ಮಾನಸಿಕವಾಗಿ ಕುಗ್ಗಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಸುಮಾರು 9.30ರ ಸುಮಾರಿಗೆ ಸುದೀಪ್‌ಗೆ ಫೋನ್ ಕರೆ ಬಂದಿದ್ದು, ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದ ಎನ್ನಲಾಗಿದೆ. ಆದರೆ ನಂತರ ಆತ ವಾಪಸಾಗಲೇ ಇಲ್ಲ. ರಾತ್ರಿ ಪೂರ್ತಿ ಹುಡುಕಾಟ ನಡೆದರೂ ಪತ್ತೆಯಾಗಲಿಲ್ಲ. ಮರುದಿನ ಸುದೀಪ್ ಶವವು ಎಸ್. ಅಂಕನಹಳ್ಳಿಯ ಬಳಿ ರಸ್ತೆ ಬದಿಯಲ್ಲಿ ಬೆಳಿಗ್ಗೆ ಪತ್ತೆಯಾಗಿದೆ.

ಶವದ ಪಕ್ಕದಲ್ಲೇ ಬೈಕ್ ಬಿದ್ದಿದ್ದರೂ ವಾಹನಕ್ಕೆ ಯಾವುದೇ ಗಂಭೀರ ಹಾನಿಯಾಗಿಲ್ಲ. ಶವದ ಮೇಲೆ ತೀವ್ರ ಗಾಯದ ಗುರುತುಗಳಿದ್ದು, ಸೊಪ್ಪುಗಳನ್ನು ಹಾಕಿ ಮುಚ್ಚಲಾಗಿದೆ. ಸ್ಥಳದಲ್ಲಿ ಕುಡುಗೋಲು ಹಾಗೂ ರಕ್ತದ ಕಲೆಗಳು ಪತ್ತೆಯಾಗಿದ್ದು, ಅಪಘಾತವಲ್ಲ ಎಂಬ ಶಂಕೆ ಹುಟ್ಟಿಸಿದೆ.

 “ಹುಡುಗಿ ಕಡೆಯವರು ಸುದೀಪ್‌ ನನ್ನು ಮಾತನಾಡಿಸಲು ಕರೆಸಿ ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.