ಅರಿವಳಿಕೆ ನೀಡಿ ಚರ್ಮರೋಗ ತಜ್ಞೆಯಾಗಿದ್ದ ಪತ್ನಿಯ ಹತ್ಯೆ; ಶಸ್ತ್ರಚಿಕಿತ್ಸಕ ಪತಿ ಬಂಧನ | ಸಹಜ ಸಾವು ಎಂದು ಬಿಂಬಿಸಿದ್ದ ಪ್ರಕರಣ
ಬೆಂಗಳೂರು, ಅ.15: ಚರ್ಮರೋಗ ತಜ್ಞೆಯ ಸಂಶಯಾಸ್ಪದ ಸಾವಿನ ಆರು ತಿಂಗಳ ನಂತರ, ಆಕೆಯ ಪತಿ, ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿ ಅವರನ್ನು 'ಪ್ರೊಪೋಫೊಲ್' ಎನ್ನುವ ಅರಿವಳಿಕೆ ಔಷಧ ನೀಡಿ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಸಹಜ ಸಾವು ಎಂದು ಈ ದಾಖಲಿಸಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವೈದ್ಯರಾದ ಡಾ. ಕೃತಿಕಾ ಮತ್ತು ಡಾ. ಮಹೇಂದ್ರ ರೆಡ್ಡಿ ಅವರು 2024ರ ಮೇ 26ರಂದು ವಿವಾಹವಾದರು. ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿದ್ದರು. 28 ವರ್ಷದ ಕೃತಿಕಾ ಅವರು ಚರ್ಮರೋಗ ತಜ್ಞೆಯಾಗಿದ್ದು, ಶೀಘ್ರದಲ್ಲೇ ತಮ್ಮ ಕನಸಿನ ಕ್ಲಿನಿಕ್ ‘ಸ್ಕಿನ್ & ಸ್ಕಾಲ್ಪೆಲ್’ ಅನ್ನು ಆರಂಭಿಸುವ ಯೋಜನೆಯಲ್ಲಿದ್ದರು.
ಆದರೆ ವಿವಾಹದ ಕೇವಲ 11 ತಿಂಗಳಲ್ಲೇ, 2025ರ ಏಪ್ರಿಲ್ 23ರಂದು ಕೃತಿಕಾ ಅವರು ತಮ್ಮ ತಂದೆಯ ಮನೆಯಲ್ಲಿ ಅಕಸ್ಮಾತ್ ಕುಸಿದು ಬಿದ್ದರು. ಮಹೇಂದ್ರ ಅವರು ತಕ್ಷಣ ಚಿಕಿತ್ಸೆ ನೀಡುತ್ತಿರುವ ನೆಪದಲ್ಲಿ ಎರಡು ದಿನಗಳ ಕಾಲ ಇಂಟ್ರಾವೆನಸ್ ಇಂಜೆಕ್ಷನ್‌ಗಳನ್ನು ನೀಡಿದ್ದರು. ನಂತರ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಆರಂಭದಲ್ಲಿ ಸಹಜ ಸಾವು ಎಂಬಂತೆ ಕಂಡು ಬಂದಿದ್ದರಿಂದ ಪೊಲೀಸರು ಅಸ್ವಾಭಾವಿಕ ಮರಣ ವರದಿ (UDR) ಪ್ರಕರಣ ದಾಖಲಿಸಿದ್ದರು. ಆದರೆ ಕೃತಿಕಾ ಅವರ ಅಕ್ಕ, ರೇಡಿಯಾಲಜಿಸ್ಟ್ ಡಾ. ನಿಕಿತಾ ಎಂ. ರೆಡ್ಡಿ ಅವರು ಸಾವು ಕುರಿತು ಗಂಭೀರ ಅನುಮಾನ ವ್ಯಕ್ತಪಡಿಸಿ ಪುನರ್ ತನಿಖೆಗೆ ಒತ್ತಾಯಿಸಿದರು. ಅವರ ವಾದದ ಪ್ರಕಾರ, ಕೃತಿಕಾ ಅವರಿಗೆ ಯಾವುದೇ ತೀವ್ರ ಆರೋಗ್ಯ ಸಮಸ್ಯೆಗಳಿರಲಿಲ್ಲ ಮತ್ತು ಅವರ ಸಾವಿನ ಸಂದರ್ಭಗಳು ಎಲ್ಲವೂ ಸರಿ ಇದ್ದಂತೆ ಕಂಡಿರಲಿಲ್ಲ.
ಆರು ತಿಂಗಳ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಬೆಳಕಿಗೆ ಬಂದಿತು. ಕೃತಿಕಾ ಅವರ ದೇಹದ ಹಲವು ಅಂಗಾಂಗಗಳಲ್ಲಿ ‘ಪ್ರೊಪೋಫೊಲ್’ ಎಂಬ ಅರಿವಳಿಕೆ ಔಷಧದ ಅಂಶಗಳು ಪತ್ತೆಯಾಗಿದ್ದು, ಅದರಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ತಜ್ಞರು ದೃಢಪಡಿಸಿದರು.
ಪ್ರೊಪೋಫೊಲ್ ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ (OT) ಮತ್ತು ಐಸಿಯುಗಳಲ್ಲಿ ಮಾತ್ರ ವೈದ್ಯಕೀಯ ಮೇಲ್ವಿಚಾರಣೆಯಡಿ ಬಳಸಲಾಗುತ್ತದೆ. ಸಾಮಾನ್ಯ ಬಳಕೆಗೆ ಅದು ಸಂಪೂರ್ಣವಾಗಿ ನಿಷಿದ್ಧವಾಗಿದೆ.
ಈ ವರದಿಯ ಬಳಿಕ, ಮಾರತಹಳ್ಳಿ ಪೊಲೀಸರು ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (ಭಾ.ನ.ಸಂ) 2023ರ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಮರು ತನಿಖೆ ಮಾಡಿದರು.
ಘಟನೆಯ ನಂತರ ಉಡುಪಿ ಜಿಲ್ಲೆಯ ಮಣಿಪಾಲಕ್ಕೆ ಸ್ಥಳಾಂತರಗೊಂಡಿದ್ದ ಕೃತಿಕಾ ಪತಿ ಮಹೇಂದ್ರ ಅವರನ್ನು ಅಕ್ಟೋಬರ್ 14ರಂದು ಬಂಧಿಸಲಾಯಿತು. ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಹೇಂದ್ರ ಅವರು ಶಸ್ತ್ರಚಿಕಿತ್ಸಕನಾಗಿ ಹೊಂದಿದ್ದ ವೃತ್ತಿಪರ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಆಸ್ಪತ್ರೆಯ ಓಟಿ ಮತ್ತು ಐಸಿಯುಗಳಲ್ಲಿ ಬಳಸುವ ಪ್ರೊಪೋಫೊಲ್ ಅನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ನಂತರ ಅದನ್ನು ತಮ್ಮ ಪತ್ನಿಗೆ ನೀಡಿ, ಆಕೆ ಮೃತಪಟ್ಟ ಬಳಿಕ ಸಹಜ ಸಾವು ಎಂದು ತೋರಿಸಲು ಪ್ರಯತ್ನಿಸಿದ್ದರು.
ತನಿಖಾಧಿಕಾರಿಗಳು ಡಾ.ಮಹೇಂದ್ರ ಅವರು ಕೊಲೆ ಯೋಜನೆ ರೂಪಿಸಲು, ಸಾಕ್ಷ್ಯ ಮರೆಮಾಚಲು ಮತ್ತು ವೈದ್ಯಕೀಯ ದಾಖಲೆಗಳನ್ನು ತಿದ್ದಲು ತಮ್ಮ ವೈದ್ಯಕೀಯ ಜ್ಞಾನವನ್ನು ಹೇಗೆ ಬಳಸಿದರು ಎಂಬುದರ ಕುರಿತು ಆಳವಾದ ತನಿಖೆ ನಡೆಸುತ್ತಿದಾದಾಖಲಾಗಿತ್ತು.
ಮಹೇಂದ್ರ ಅವರ ಕುಟುಂಬಕ್ಕೂ ಕ್ರಿಮಿನಲ್ ಹಿನ್ನಲೆ ಇದ್ದು, ಅವರ ಅವಳಿ ಸಹೋದರ ಡಾ. ನಾಗೇಂದ್ರ ರೆಡ್ಡಿ ಜಿ.ಎಸ್. 2018ರಲ್ಲಿ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಹಲವಾರು ವಂಚನೆ ಮತ್ತು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಮಹೇಂದ್ರ ಮತ್ತು ಮತ್ತೊಬ್ಬ ಸಹೋದರ ರಾಘವ ರೆಡ್ಡಿ ಜಿ.ಎಸ್. ಅವರು 2023ರಲ್ಲಿ ಅದೇ ದೂರುದಾರರ ಕುಟುಂಬವನ್ನು ಬೆದರಿಸಿದ್ದಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಕೃತಿಕಾ ಅವರ ಕುಟುಂಬದವರ ಪ್ರಕಾರ, ಈ ಮಾಹಿತಿಯನ್ನು ಮದುವೆಯ ವೇಳೆ ಸಂಪೂರ್ಣವಾಗಿ ಮುಚ್ಚಿಡಲಾಗಿತ್ತು.
ಕೃತಿಕಾ ಅವರು ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿಂದ ಎಂಬಿಬಿಎಸ್, ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಿಂದ ಎಂ.ಡಿ (ಡರ್ಮಟಾಲಜಿ), ಹಾಗೂ ಎನ್‌ಬಿಇಎಂಎಸ್‌ನಿಂದ ಡಿಎನ್‌ಬಿ (ಡರ್ಮಟಾಲಜಿ, ವೆನೆರಿಯಾಲಜಿ ಮತ್ತು ಲೆಪ್ರಸಿ) ಪದವಿಗಳನ್ನು ಪಡೆದಿದ್ದರು. ಅವರು 2025ರ ಮೇ 4ರಂದು ತಮ್ಮ ಕನಸಿನ ಕ್ಲಿನಿಕ್ “ಸ್ಕಿನ್ & ಸ್ಕಾಲ್ಪೆಲ್” ಉದ್ಘಾಟನೆಗೆ ಸಿದ್ಧರಾಗಿದ್ದರು. ಆದರೆ ಅದಕ್ಕೆ ಕೇವಲ ಹತ್ತು ದಿನಗಳ ಮುನ್ನವೇ ಅವರನ್ನು ಕೊಲೆ ಮಾಡಲಾಗಿತ್ತು.
ಕೃತಿಕಾ ಅವರ ತಂದೆ ಮುನಿ ರೆಡ್ಡಿ ಅವರು ಅಕ್ಟೋಬರ್ 14ರಂದು ಅಧಿಕೃತ ದೂರು ದಾಖಲಿಸಿದ್ದಾರೆ.
“ಕೃತಿಕಾ ತನ್ನ ಗಂಡನನ್ನು ಸಂಪೂರ್ಣವಾಗಿ ನಂಬಿದ್ದಳು. ಜೀವ ಉಳಿಸಬೇಕಾದ ವೈದ್ಯಕೀಯ ಜ್ಞಾನವನ್ನೇ ಬಳಸಿ ಅವಳ ಜೀವವನ್ನು ಕೊಲ್ಲಲು ಬಳಸಲಾಗಿದೆ. ಕೃತಿಕಾಗೆ ನ್ಯಾಯ ದೊರೆತರೆ ಅದು ಪ್ರೀತಿ ಮತ್ತು ನಂಬಿಕೆಯಲ್ಲಿ ಬದುಕುವ ಪ್ರತಿಯೊಬ್ಬ ಮಹಿಳೆಗೆ ನ್ಯಾಯ ದೊರೆತಂತೆಯೇ,” ಎಂದು ಅವರು ಭಾವುಕರಾಗಿ ಹೇಳಿದರು.
ಪೊಲೀಸ್ ಮೂಲಗಳ ಪ್ರಕಾರ, ತನಿಖೆ ಇನ್ನೂ ಮುಂದುವರಿದಿದ್ದು, ಮಹೇಂದ್ರ ಅವರು ಬಳಸಿದ ಪ್ರೊಪೋಫೊಲ್ ಔಷಧವನ್ನು ಯಾವ ಮೂಲದಿಂದ ಪಡೆದರು, ಅದರ ಖರೀದಿ ದಾಖಲೆಗಳು ಹಾಗೂ ಆಸ್ಪತ್ರೆಯ ಸ್ಟಾಕ್ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.