ಮೈಸೂರು:ಪತ್ನಿ ಹತ್ಯೆಗೆ ವಿರಾಜಪೇಟೆ ಮೂಲದ ಇಬ್ಬರಿಗೆ ಸುಪಾರಿ ಕೊಟ್ಟ ಪತಿ

Dec 19, 2025 - 10:21
Dec 19, 2025 - 13:49
 0  2.5k
ಮೈಸೂರು:ಪತ್ನಿ ಹತ್ಯೆಗೆ ವಿರಾಜಪೇಟೆ ಮೂಲದ ಇಬ್ಬರಿಗೆ ಸುಪಾರಿ ಕೊಟ್ಟ ಪತಿ

ಮೈಸೂರು, ಡಿ. 18: ಪತ್ನಿಯನ್ನು ಹತ್ಯೆ ಮಾಡಲು ಪತಿಯೇ ಸುಪಾರಿ ನೀಡಿದ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಬಿಎಂಶ್ರೀ ನಗರದಲ್ಲಿ ಈ ಘಟನೆ ನಡೆದಿದ್ದು, ಬಂಧಿತರನ್ನು ಮಹೇಶ್ (ಪತಿ), ಭಾಸ್ಕರ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಹಲ್ಲೆಗೆ ಒಳಗಾದ ಪತ್ನಿ ನಾಗರತ್ನ ಅವರನ್ನು ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಪಾನಿಪುರಿ ವ್ಯಾಪಾರ ನಡೆಸುತ್ತಿದ್ದ ಮಹೇಶ್, ಪತ್ನಿ ನಾಗರತ್ನ ಅವರ ವರ್ತನೆಯಿಂದ ಬೇಸತ್ತಿದ್ದ ಎನ್ನಲಾಗಿದೆ. ಗಂಡನ ಆದಾಯವನ್ನು ಬಡ್ಡಿಗೆ ನೀಡಿದ್ದರೂ ಮನೆ ಖರ್ಚಿಗೆ ಹಣ ನೀಡದೆ ಇರುವುದು ಹಾಗೂ ಗಂಡನಿಗೆ ಅಗತ್ಯ ಮರ್ಯಾದೆ ನೀಡದೆ ನಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ ಎನ್ನಲಾಗಿದೆ.

ಈ ಉದ್ದೇಶಕ್ಕಾಗಿ ವಿರಾಜಪೇಟೆ ಮೂಲದ ಭಾಸ್ಕರ್ ಮತ್ತು ಅಭಿಷೇಕ್ ಎಂಬವರಿಗೆ ಮಹೇಶ್ ಸುಪಾರಿ ನೀಡಿದ್ದಾನೆ. ಯೋಜನೆಯಂತೆ ಆರೋಪಿಗಳು ರಾತ್ರಿ ವೇಳೆ ಮನೆಗೆ ನುಗ್ಗಿ, ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ನಾಗರತ್ನ ಅವರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಕೆಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. 

ಘಟನೆಯಲ್ಲಿ ಗಾಯಗೊಂಡ ನಾಗರತ್ನ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣದ ತನಿಖೆಯಲ್ಲಿ ಪತಿಯೇ ಹತ್ಯೆಗೆ ಸುಪಾರಿ ನೀಡಿದ್ದ ಸಂಗತಿ ದೃಢಪಟ್ಟಿದೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 3
Wow Wow 1