ಮೈಸೂರು | ಹಗಲಿನ ಹೊತ್ತಲ್ಲೇ ರಸ್ತೆ ಮಧ್ಯೆ ರೌಡಿಯ ಆಪ್ತನ ಕೊಚ್ಚಿ ಕೊಲೆ!: ನಗರದ ಪೊಲೀಸ್ ಕಮಿಷನರ್ ಕಚೇರಿ ಸಮೀಪದಲ್ಲೇ ನಡೆದ ಘಟನೆ

Oct 7, 2025 - 19:11
 0  1.4k
ಮೈಸೂರು | ಹಗಲಿನ ಹೊತ್ತಲ್ಲೇ ರಸ್ತೆ ಮಧ್ಯೆ ರೌಡಿಯ ಆಪ್ತನ ಕೊಚ್ಚಿ ಕೊಲೆ!:  ನಗರದ ಪೊಲೀಸ್ ಕಮಿಷನರ್ ಕಚೇರಿ ಸಮೀಪದಲ್ಲೇ ನಡೆದ ಘಟನೆ
Photo credit: Vb (ಫೋಟೋ: ಕೊಲೆಯಾದ ವ್ಯಕ್ತಿ)

ಮೈಸೂರು: ನಗರದ ಹೃದಯಭಾಗದಲ್ಲೇ, ಕಮಿಷನರ್ ಕಚೇರಿಯಿಂದ ಸಮೀಪದಲ್ಲೇ ಹಗಲಿನ ಹೊತ್ತಲ್ಲೇ ದುಷ್ಕರ್ಮಿಗಳ ಗುಂಪೊಂದು ರೌಡಿಯ ಆಪ್ತನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಮೈಸೂರಿನ ವಸ್ತು ಪ್ರದರ್ಶನ ಮೈದಾನದ ಎದುರು ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತನನ್ನು ಕ್ಯಾತಮಾರನಹಳ್ಳಿಯ ವೆಂಕಟೇಶ್ ಅಲಿಯಾಸ್ ಗಿಲ್ಕಿ (38) ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೆಂಕಟೇಶ್‌ ಮೇಲೆ ಆಟೋದಲ್ಲಿ ಆಗಮಿಸಿದ ಐವರ ತಂಡ ಅಡ್ಡ ಹಾಕಿ, ಖಾರದ ಪುಡಿ ಎರಚಿ, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದೆ ಎಂದು ತಿಳಿದು ಬಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೆಂಕಟೇಶ್ ಸ್ಥಳದಲ್ಲೇ ಕುಸಿದು ಬಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದರು ಎನ್ನಲಾಗಿದೆ.

ಮೃತ ವೆಂಕಟೇಶ್, ಕಳೆದ ವರ್ಷ ಕೊಲೆಯಾದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್‌ನ ಆಪ್ತನಾಗಿದ್ದು, ಆತನ ಸಾವಿನ ಬಳಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದನೆಂದು ತನಿಖಾ ಮೂಲಗಳು ತಿಳಿಸಿವೆ. ಹಳೆಯ ವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

 ಘಟನೆಯ ಸಂಪೂರ್ಣ ಚಿತ್ರಣ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ದೃಶ್ಯಾವಳಿಯನ್ನು ವಶಪಡಿಸಿಕೊಂಡು ವಿಶ್ಲೇಷಣೆ ಆರಂಭಿಸಿದ್ದಾರೆ.

 ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್, ಡಿಸಿಪಿಗಳಾದ ಸುಂದರ್ ರಾಜ್ ಹಾಗೂ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0