ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; 'ಎಕ್ಸ್' ಕಾರಣ?

Dec 28, 2025 - 17:57
 0  1.9k
ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; 'ಎಕ್ಸ್' ಕಾರಣ?
Photo credit: TV09 (ಫೋಟೋ: ಗಾನವಿ&ಸೂರಜ್)

ಬೆಂಗಳೂರು, ಡಿ. 28: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಎದುರಾಗಿದೆ. ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಪತಿ ಸೂರಜ್ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿ, ಗಾನವಿಯ ಹಿಂದಿನ ಪ್ರೇಮ ಸಂಬಂಧವೇ ಇಡೀ ದುರಂತಕ್ಕೆ ಕಾರಣವೆಂದು ಸೂರಜ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಸೂರಜ್ ಕುಟುಂಬದವರು ಸಲ್ಲಿಸಿದ ದೂರಿನ ಪ್ರಕಾರ, ಗಾನವಿ ಈ ಹಿಂದೆ ಹರ್ಷಾ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದರೂ, ಕುಟುಂಬದ ಒತ್ತಾಯದಿಂದ ಸೂರಜ್ ಅವರನ್ನು ವಿವಾಹವಾಗಿದ್ದಾಳೆ ಎಂದು ಆರೋಪಿಸಲಾಗಿದೆ. ವಿವಾಹದ ಬಳಿಕ ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದ ಸಂದರ್ಭದಲ್ಲಿ ಈ ವಿಚಾರವನ್ನು ಗಾನವಿಯೇ ಸೂರಜ್‌ಗೆ ತಿಳಿಸಿದ್ದಾಳೆ ಎನ್ನಲಾಗಿದ್ದು, ಇದರಿಂದ ಆತ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ. ಪರಿಣಾಮವಾಗಿ ದಂಪತಿ ಹನಿಮೂನ್ ಅರ್ಧದಲ್ಲೇ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದರು ಎನ್ನಲಾಗಿದೆ.

ಅನಂತರ ಗಾನವಿಯನ್ನು ಆಕೆಯ ಕುಟುಂಬಸ್ಥರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ಡಿಸೆಂಬರ್ 24ರಂದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯ ನಂತರ ಗಾನವಿಯ ತಾಯಿ ರುಕ್ಮಿಣಿ ಅವರು ಸೂರಜ್ ಹಾಗೂ ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ದಾಖಲಿಸಿದ್ದರು.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ನಂತರ ಮಾನಸಿಕ ಒತ್ತಡಕ್ಕೆ ಒಳಗಾದ ಸೂರಜ್ ಹಾಗೂ ಆತನ ತಾಯಿ ಜಯಂತಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅಲ್ಲಿ ಸೂರಜ್ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸೂರಜ್ ತಾಯಿ ಜಯಂತಿಯೂ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಸೂರಜ್ ಭಾವ ರಾಜ್‌ಕುಮಾರ್ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಪ್ರತಿದೂರು ಸಲ್ಲಿಸಿದ್ದು, ಗಾನವಿಯ ಹಿಂದಿನ ಪ್ರೇಮ ವಿಚಾರವನ್ನು ಮರೆಮಾಚಿ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ದೂರಿದ್ದಾರೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ ಸೇರಿದಂತೆ ಕೆಲ ಕುಟುಂಬಸ್ಥರು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರು ಹಾಗೂ ಪ್ರತಿದೂರುಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0