ನವವಿವಾಹಿತೆಯ ಆತ್ಮಹತ್ಯೆ ಪ್ರಕರಣ | ಕುಟುಂಬಸ್ಥರ ವಿರುದ್ಧ ಪತಿಯ ಮನೆಯವರಿಂದ ದೂರು; 9 ಮಂದಿ ವಿರುದ್ಧ ಎಫ್‌ಐಆರ್

Jan 2, 2026 - 23:16
 0  927
ನವವಿವಾಹಿತೆಯ ಆತ್ಮಹತ್ಯೆ ಪ್ರಕರಣ | ಕುಟುಂಬಸ್ಥರ ವಿರುದ್ಧ ಪತಿಯ ಮನೆಯವರಿಂದ ದೂರು; 9 ಮಂದಿ ವಿರುದ್ಧ ಎಫ್‌ಐಆರ್
ಪ್ರಾತಿನಿಧಿಕ ಚಿತ್ರ

ಬೆಂಗಳೂರು, ಜ. 1: ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ನವವಿವಾಹಿತೆ ಗಾನವಿ ಪ್ರಕರಣದಲ್ಲಿ, ಪತಿಯ ಮನೆಯವರು ಆಕೆಯ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ 9 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮೃತ ಗಾನವಿ ವಾರಗಿತ್ತಿ ಸಿಂಧು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಇದಕ್ಕೂ ಮೊದಲು, ಗಂಡನ ಮನೆಯವರು ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಪತಿ ಸೂರಜ್ ಹಾಗೂ ಅವರ ಕುಟುಂಬದವರ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಾನವಿ ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಪತಿ ಸೂರಜ್ ಅವರು ಮಹಾರಾಷ್ಟ್ರದ ನಾಗಪುರದಲ್ಲಿನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಬಳಿಕ ಅವರ ತಾಯಿ ಜಯಂತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ವಿವರ; 

ದೂರಿನ ಪ್ರಕಾರ, ಸೂರಜ್ ಮತ್ತು ಗಾನವಿ ಅವರ ವಿವಾಹ ಕಳೆದ ಅಕ್ಟೋಬರ್ 29ರಂದು ನಡೆದಿತ್ತು. ಡಿಸೆಂಬರ್ 17ರಂದು ನವದಂಪತಿ ಶ್ರೀಲಂಕಾಕ್ಕೆ ಹನಿಮೂನ್‌ಗೆ ತೆರಳಿದ್ದರು. ಈ ವೇಳೆ ಗಾನವಿ ಅವರು ಹರ್ಷ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಅವನನ್ನು ಮದುವೆಯಾಗಬೇಕೆಂಬ ಆಸೆ ಹೊಂದಿರುವುದಾಗಿ ಹಾಗೂ ಸೂರಜ್ ಜೊತೆಗಿನ ವಿವಾಹ ತನ್ನ ಇಚ್ಛೆಗೆ ವಿರುದ್ಧವಾಗಿದೆ ಎಂದು ಹೇಳಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮಾತುಗಳಿಂದ ಮಾನಸಿಕ ಆಘಾತಕ್ಕೊಳಗಾದ ಸೂರಜ್, ಹನಿಮೂನ್ ಪ್ರವಾಸವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿ ನಗರಕ್ಕೆ ಮರಳಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಡಿಸೆಂಬರ್ 24ರಂದು ಆತ್ಮಹತ್ಯೆ

ಗಾನವಿ ಅವರ ಪ್ರೇಮ ಸಂಬಂಧದ ವಿಷಯವನ್ನು ತಿಳಿಸದೆ ಕುಟುಂಬದವರು ಮದುವೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಈ ಮಧ್ಯೆ, ಆಕೆಯ ಕುಟುಂಬದ ಮನವಿಯಂತೆ ಒಂದು ವಾರದ ಕಾಲ ಗಾನವಿಯನ್ನು ಅವರ ಮನೆಗೆ ಕಳುಹಿಸಲಾಗಿತ್ತು.

ಡಿಸೆಂಬರ್ 24ರಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಳಿಕ ಆಕೆಯ ಕುಟುಂಬದವರು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು, ಮಾಧ್ಯಮಗಳಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡುವ ಮೂಲಕ ಅಪಪ್ರಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 1
Wow Wow 0