ವಿರಾಜಪೇಟೆಯಲ್ಲಿ ಮಲಯಾಳಿ ಬಾಂಧವರಿದ ವಿಜೃಂಭಣೆಯ ಓಣಂ ಆಚರಣೆ

Aug 26, 2026 - 14:16
 0  128
ವಿರಾಜಪೇಟೆಯಲ್ಲಿ ಮಲಯಾಳಿ ಬಾಂಧವರಿದ ವಿಜೃಂಭಣೆಯ ಓಣಂ ಆಚರಣೆ

ವಿರಾಜಪೇಟೆ:ತಾಲೂಕಿನಾದ್ಯಂತ ಮಲಯಾಳಿ ಬಾಂಧವರ ಮನೆ ಮನೆಗಳಲ್ಲಿ ಓಣಂ ಹಬ್ಬದ ಸಡಗರ-ಸಂಭ್ರಮ ಮನೆಮಾಡಿತ್ತು. ಸೌಹಾರ್ದತೆ ಮತ್ತು ಪ್ರಕೃತಿಯ ಸಮೃದ್ಧಿ ತ್ಯಾಗದ ಸಂಕೇತವಾದ ಓಣಂ ಹಬ್ಬವನ್ನು ಜನರು ಕುಟುಂಬಸ್ಥರೊಂದಿಗೆ ಅತ್ಯಂತ ವಿಜೃಂಭಣೆ ಹಾಗೂ ಸಂಭ್ರಮದಿಂದ, ಸೌಹಾರ್ದತೆಯಿಂದ ಆಚರಿಸಿದರು. 

  ಬೆಳಿಗ್ಗೆಯಿಂದಲೇ ಮನೆಯಂಗಳದಲ್ಲಿ ವರ್ಣರಂಜಿತ ಹೂವುಗಳಿಂದ ಕಣ್ಣುಮನ ಸೆಳೆಯುವ, ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ಸಾಂಪ್ರದಾಯಿಕ 'ಪೂಕಳಂ' (ಹೂವಿನ ರಂಗೋಲಿ) ಬಿಡಿಸಿ, ಧೂಪ-ದೀಪಗಳೊಂದಿಗೆ ಮಹಾಬಲಿ ಚಕ್ರವರ್ತಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು.

   ಸಾಂಪ್ರದಾಯಿಕ ಉಡುಪುಗಳಾದ ಶ್ವೇತವರ್ಣದ ಸೀರೆ ಹಾಗೂ ಧೋತಿ ಧರಿಸಿ ಕುಟುಂಬಸ್ಥರು ಹಬ್ಬದ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ರುಚಿಕರ 'ಓಣಂ ಸದ್ಯ ಸವಿದ ಕುಟುಂಬಸ್ಥರು:

ಓಣಂ ಹಬ್ಬದ ಪ್ರಮುಖ ಆಕರ್ಷಣೆಯಾದ 21ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಖಾದ್ಯಗಳು, ಪಾಯಸವನ್ನೊಳಗೊಂಡ ಸಾಂಪ್ರದಾಯಿಕ ಓಣಂ ಸದ್ಯ (ಬಾಳೆ ಎಲೆ ಊಟ) ಬಾಳೆ ಎಲೆಯಲ್ಲಿ ಅನ್ನ ಸಾಂಬಾರ್, ಅವಿಯಲ್, ಇಂಜಿಪುಳಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳು ಹಾಗೂ ರುಚಿಕರ ಪಾಯಸವನ್ನು ಬಡಿಸಿ ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ಸವಿದರು.

  ಆಧುನಿಕತೆಯ ನಡುವೆಯೂ ಮನೆ-ಮನಗಳಲ್ಲಿ ಸಂಸ್ಕೃತಿ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಬಾರಿಯ ಓಣಂ ಆಚರಣೆ ಅತ್ಯಂತ ವೈಭವದಿಂದ ಜರುಗಿತು. ಬಂಧು-ಮಿತ್ರರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು."ಕೊಡಗಿನ ನೆಲದಲ್ಲಿ ಪ್ರತಿಯೊಂದು ಹಬ್ಬವೂ ನಾಡಿನ ಸಾಮರಸ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಮಲಯಾಳಿ ಬಾಂಧವರು ಆಚರಿಸುವ ಓಣಂ ಹಬ್ಬವು ಪ್ರೀತಿ, ಕರುಣೆ ಹಾಗೂ ಸಹೋದರತ್ವವನ್ನು ಸಾರುವ ಪವಿತ್ರ ಆಚರಣೆಯಾಗಿದೆ,"ಎಂದು ಪರಸ್ಪರ ಶುಭಾಶಯ ಕೋರಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0