ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು;ಶಾಸಕ ಡಾ.ಮಂತರ್ ಗೌಡ

ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು;ಶಾಸಕ ಡಾ.ಮಂತರ್ ಗೌಡ

ಮಡಿಕೇರಿ;ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾರಿದ್ದಾರೆ. ಆದ್ದರಿಂದ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.

      ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

      ಯುವ ಜನರು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರಂತೆ ನಿರಂತರ ಹಾಗೂ ಕಠಿಣ ಪರಿಶ್ರಮ ಅಗತ್ಯ ಎಂದು ಶಾಸಕರು ಪ್ರತಿಪಾದಿಸಿದರು. 

     ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಮೇಲೆ ಬರಲು ಶ್ರಮ ವಹಿಸಬೇಕು. ಪರಿಶ್ರಮ ಇಲ್ಲದೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಅಸಾಧ್ಯ ಎಂದು ಡಾ.ಮಂತರ್ ಗೌಡ ಅವರು ಕಿವಿಮಾತು ಹೇಳಿದರು.

       ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಗುರಿ, ಉದ್ದೇಶ, ಆಶಯ, ಸಾಧನೆ ಇವುಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಮುನ್ನಡೆಯಬೇಕು. ಪ್ರತಿ ದಿನವೂ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದು ಶಾಸಕರು ಸಲಹೆ ಮಾಡಿದರು. 

     ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರತಿಫಲವಾಗಿ ನಾವು ವಿದ್ಯೆ, ಉದ್ಯೋಗ ಪಡೆದು, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇವೆ ಎಂದರು. 

        "ಇದೇ ಮೇ ಅಂತ್ಯದ ವೇಳೆಗೆ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಲು ಪ್ರಯತ್ನಿಸಲಾಗುವುದು, ಆ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮ ಯಶಸ್ಸಿಗೆ ಕೋರಲಾಗುವುದು ಎಂದು ಶಾಸಕರು ತಿಳಿಸಿದರು."

          ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ, ಧರ್ಮ ಮೀರಿ ಬೆಳೆದ ಅಪ್ರತಿಮ ಪ್ರತಿಭೆ ಎಂದರು ಗುಣಗಾನ ಮಾಡಿದರು. 

       ಅಂಬೇಡ್ಕರ್ ಎಂದರೆ ಐಕಾನ್ ಹಾಗೂ ಐಡಿಯಾಲಜಿ ಎಂದರೆ ಅತಿಶಯೋಕ್ತಿಯಲ್ಲ, ಆ ನಿಟ್ಟಿನಲ್ಲಿ ಅವರ ಸಿದ್ದಾಂತ, ದೂರದೃಷ್ಟಿ ಮುಂದೆಯೂ ಪ್ರಸ್ತುತವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ನುಡಿದರು. 

        ಅಸ್ಪೃಶ್ಯತೆ ಹಾಗೂ ಅಸಮಾನತೆಯ ನೋವು ಅನುಭವಿಸಿ, ಮೇಲು-ಕೀಳು, ಬಡವ-ಬಲ್ಲಿದ, ಶ್ರೇಷ್ಠ-ಕನಿಷ್ಠ ಹೀಗೆ ಹಲವು ವಿಭಿನ್ನತೆ ಹೊಂದಿರುವ ಸಮಾಜದಲ್ಲಿ ಸಂವಿಧಾನದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಶ್ರಮಿಸಿಸಿದ್ದಾರೆ. ಇಂತಹ ಮಾಹಾನ್ ಚೇತನ ಅಂಬೇಡ್ಕರ್ ಅವರನ್ನು ಎಷ್ಟು ಸ್ಮರಿಸಿದರೂ ಸಾಲದು ಎಂದರು. 

       ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ತುಳಿತಕ್ಕೆ ಒಳಗಾದವರು ಗೌರವಯುತವಾಗಿ ಬದುಕಲು ಸಂವಿಧಾನದ ಮೂಲಕ ಅವಕಾಶ ಮಾಡಿದ್ದಾರೆ ಎಂದು ಎಸ್.ಜೆ.ಸೋಮಶೇಖರ್ ಅವರು ಸ್ಮರಿಸಿದರು. 

     ಅಂಬೇಡ್ಕರ್ ಅವರ ತತ್ವ, ಸಿದ್ದಾಂತ ಅಳವಡಿಸಿಕೊಂಡರೆ ಸಮಾನತೆ, ಸಹೋದರತೆ, ಸಹಭಾಗಿತ್ವ ತರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅವರು ಪ್ರತಿಪಾದಿಸಿದರು. 

       ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸಂದೀಪ್ ಎಸ್.ರಾವಣಿಕರ್ ಅವರು ಮಾತನಾಡಿ ಸಂವಿಧಾನ ಶಿಲ್ಪಿ, ಭಾರತ ರತ್ನ, ವಿಶ್ವಜ್ಞಾನಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಎಂದು ಒತ್ತಿ ಹೇಳಿದರು. 

        ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ರಾಷ್ಟ್ರದ ಬೆಳವಣಿಗೆ ಬಗ್ಗೆ ಅವಲೋಕನ ಮಾಡಬೇಕಿದೆ ಎಂದು ಡಾ.ಸಂದೀಪ್ ಅವರು ನುಡಿದರು. 

       ವಿಶ್ವದಲ್ಲಿ ಅಮೇರಿಕಾ ಕ್ರಾಂತಿ, ಪ್ರೆಂಚ್ ಕ್ರಾಂತಿ ಹಾಗೂ ರಷ್ಯಾ ಕ್ರಾಂತಿ ಹಾಗೂ ಚೀನಾ ಕ್ರಾಂತಿ ಬಗ್ಗೆ ಅಧ್ಯಯನ ಮಾಡಿದ್ದೇವೆ, ಆ ದಿಸೆಯಲ್ಲಿ ಈ ಎಲ್ಲಾ ರಾಷ್ಟ್ರಗಳು ಮುಂದುವರೆದಿವೆ. ಆದರೆ 1947 ರಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಇಂದಿಗೂ ಸಹ ಮುಂದುವರೆಯುತ್ತಿರುವ ರಾಷ್ಟ್ರವಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದು ಡಾ.ಸಂದೀಪ್ ಅವರು ನುಡಿದರು. 

         ಭಾರತ ಸ್ವಾತಂತ್ರ್ಯ ಪಡೆದು 76 ವರ್ಷ ಕಳೆದರೂ ಸಹ ಜಾತೀಯತೆ ನಿರ್ಮೂಲನೆ ಆಗಿದೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕಿದೆ ಎಂದು ಡಾ.ಸಂದೀಪ್ ಅವರು ಪ್ರತಿಪಾದಿಸಿದರು. 

       ರಾಷ್ಟ್ರದಲ್ಲಿನ 6 ಸಾವಿರ ಜಾತಿ ಹಾಗೂ 2 ಸಾವಿರಕ್ಕೂ ಹೆಚ್ಚು ಭಾಷೆಗಳಿರುವ ಭಾರತಕ್ಕೆ ಎಲ್ಲರಿಗೂ ಒಪ್ಪುವ ಮತ್ತು ಅಪ್ಪುವ ಸಂವಿಧಾನವನ್ನು ಅಂಬೇಡ್ಕರ್ ಅವರು ನೀಡಿದ್ದಾರೆ ಎಂದು ಡಾ.ಸಂದೀಪ್ ಅವರು ಹೇಳಿದರು.

      "ಪಶ್ಚಿಮ ಏಷ್ಯಾದಲ್ಲಿ ಯುದ್ದ ನಡೆದರೆ ಭಾರತೀಯರಿಗೆ ಭಯ ಆಗುತ್ತಿದೆ. ಅಷ್ಟರ ಮಟ್ಟಿಗೆ ಪರಾವಲಂಬಿಗಳಾಗಿದ್ದೇವೆ, ಈ ಬಗ್ಗೆಯೂ ಸಹ ಚಿಂತಿಸಬೇಕಿದೆ ಎಂದರು."

        ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ಶೋಷಿತ ಜನರ ಏಳ್ಗೆಗೆ ಶ್ರಮಿಸಿದ್ದಾರೆ. ಸ್ವಾತಂತ್ರ್ಯ ಭಾರತದಲ್ಲಿ ಶೋಷಿತರು ಆಳುವ ವರ್ಗ ಆಗಬೇಕು ಎಂದು ಹೇಳಿದ್ದಾರೆ ಎಂದು ಪ್ರಾಧ್ಯಾಪಕರು ನುಡಿದರು.

      ಭಾರತ ಸಂವಿಧಾನದಲ್ಲಿ ಪ್ರಮುಖವಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇದ್ದು, ಇವುಗಳಲ್ಲಿ ಶೋಷಿತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿದೆ. ಉಳಿದಂತೆ ಮಾಧ್ಯಮ ಹಾಗೂ ಉದ್ಯಮ ರಂಗದಲ್ಲಿ ಶೋಷಿತರ ಸಂಖ್ಯೆ ಸೋನ್ನೆ. ಆದ್ದರಿಂದ ಈ ಬಗ್ಗೆಯೂ ಅವಲೋಕನ ಮಾಡಬೇಕಿದೆ ಎಂದರು.

     ಮಹಾ ಬೋಧಿ ಸಂಘದ ಅಧ್ಯಕ್ಷರಾದ ಮೋಹನ್ ಮೌರ್ಯ ಅವರು ಹಲವು ದಶಕಗಳ ಕನಸು ನನಸಾಗುತ್ತಿದ್ದು, ಆ ದಿಸೆಯಲ್ಲಿ ಶಾಸಕರು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಾಗ ನೀಡಿ, ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಹಕರಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. 

      ಕಲಾವಿದ ಈ.ರಾಜು ಮತ್ತು ತಂಡದವರು ಅಂಬೇಡ್ಕರ್ ಕುರಿತು ಹಾಡಿದರು. 

      ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

       ಸಮಾಜ ಕಲ್ಯಾಣ ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಸಿಬ್ಬಂದಿಗಳನ್ನು ಗೌರವಿಸಲಾಯಿತು, ಹಾಗೆಯೇ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನದ ಚೆಕ್ ಅನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

     ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಪ್ರಮುಖರಾದ ಟಿ.ಪಿ.ರಮೇಶ್, ಜನಾರ್ದನ, ಎಚ್.ಎಲ್.ದಿವಾಕರ, ಪ್ರೇಮಕುಮಾರ್, ನಗರಸಭೆ ಸದಸ್ಯರಾದ ಸತೀಶ್, ಚಂದ್ರಶೇಖರ್, ಮುತ್ತುರಾಜು, ಜುಲೇಕಾಬಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶಿಲ್ದಾರರಾದ ಶ್ರೀಧರ, ಪ್ರಮುಖರಾದ ದೀಪಕ್ ಪೊನ್ನಪ್ಪ, ಪ್ರೇಮ ಕೃಷ್ಣ, ಸಿದ್ದೇಶ್, ಯಶೋಧ, ವಿನಯ ಕುಮಾರ್, ದೇವರಾಜು, ಗಣೇಶ್, ಸುದರ್ಶನ, ಕುಮಾರ, ಸುಧೀರ್, ವಾಸು, ಸಂದೀಪ್, ಪಾಲಾಕ್ಷ, ವೀರೇಂದ್ರ, ಕಿರಣ್, ಮುತ್ತಪ್ಪ, ಹರೀಶ್, ಎಸ್.ಹೊನ್ನೆಗೌಡ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಇತರರು ಇದ್ದರು.

 ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಸ್ವಾಗತಿಸಿದರು, ರಮೇಶ್ ನಿರೂಪಿಸಿದರು, ಬಾಲಕೃಷ್ಣ ರೈ ವಂದಿಸಿದರು.

       ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕಾವೇರಿ ಕಲಾಕ್ಷೇತ್ರ ಬಳಿಯಿಂದ ಗಾಂಧಿ ಭವನದ ವರೆಗೆ ಮೆರವಣಿಗೆ ನಡೆಯಿತು. 

    ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇರ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. 

       ನಗರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು, ಪ್ರಮುಖರು ಇದ್ದರು.

     ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ ಹಾಗೂ ಕಂಸಾಳೆ ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದರು.