ಆನ್‌ಲೈನ್‌ ಟ್ರೇಡಿಂಗ್ ವಂಚನೆ | ₹46.5 ಲಕ್ಷ ಕಳೆದುಕೊಂಡ ಉದ್ಯಮಿ; ಬ್ಯಾಂಕ್ ಮ್ಯಾನೇಜರ್‌ಗಳು ಸೇರಿ ನಾಲ್ವರು ಬಂಧನ

ಆನ್‌ಲೈನ್‌ ಟ್ರೇಡಿಂಗ್ ವಂಚನೆ | ₹46.5 ಲಕ್ಷ ಕಳೆದುಕೊಂಡ ಉದ್ಯಮಿ; ಬ್ಯಾಂಕ್ ಮ್ಯಾನೇಜರ್‌ಗಳು ಸೇರಿ ನಾಲ್ವರು ಬಂಧನ
Photo credit:Etv Bharath (ಫೋಟೋ: ಬಂಧಿತ‌ ಆರೋಪಿಗಳು)

ಕಾರವಾರ: ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ, ಫಾರೆಕ್ಸ್‌ ಟ್ರೇಡಿಂಗ್ ಆ್ಯಪ್ ಮೂಲಕ ಹೊನ್ನಾವರದ ಉದ್ಯಮಿಯೊಬ್ಬರಿಗೆ ₹46.50 ಲಕ್ಷ ವಂಚಿಸಿದ ಪ್ರಕರಣವನ್ನು ಉತ್ತರ ಕನ್ನಡ ಸಿಇಎನ್ ಪೊಲೀಸರು ಭೇದಿಸಿದ್ದಾರೆ.

ಅಂತಾರಾಜ್ಯ ವಂಚಕ ತಂಡದ ನಾಲ್ವರನ್ನು ಬಂಧಿಸಿದ್ದು, ಬಂಧಿತರಲ್ಲಿ ಮೂವರು ಬ್ಯಾಂಕ್‌ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಭಾತನಗರದ ಗಿರೀಶ್ (35) ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ ‘MarketAxess’ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದರು. ನಂತರ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ ಆರೋಪಿಗಳ ಮಾರ್ಗದರ್ಶನದಲ್ಲಿ, ಮೇ 28ರಿಂದ ಜುಲೈ 23, 2025ರ ಅವಧಿಯಲ್ಲಿ ಹಂತ ಹಂತವಾಗಿ ₹46,50,000 ಹಣವನ್ನು ಹೂಡಿಕೆ ಮಾಡಲಾಗಿತ್ತು. ಆ್ಯಪ್‌ನಲ್ಲಿ ಹೂಡಿಕೆಯ ಮೊತ್ತ ₹75 ಲಕ್ಷಕ್ಕೆ ಏರಿದಂತೆ ತೋರಿದರೂ ವಿತ್‌ಡ್ರಾ ಆಗದ ಕಾರಣ ವಂಚನೆ ನಡೆದಿರುವುದು ಬಯಲಾಗಿದ್ದು, ನಂತರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಇಎನ್ ಡಿವೈಎಸ್‌ಪಿ ಬಿ. ಅಶ್ವಿನಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ನಂತರ ನಡೆದ ಕಾರ್ಯಾಚರಣೆಯಲ್ಲಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಂ.ಡಿ. ಆಲಮ್, ಹೈದರಾಬಾದ್‌ನಲ್ಲಿ ಬಿಲ್ಲೆ ಪ್ರವೀಣಕುಮಾರ್ (35) ಮತ್ತು ವಿನಯ್ ಕುಮಾರ್ (30) ಬಂಧಿತರಾಗಿದ್ದಾರೆ. ಇವರು ಆರ್‌ಬಿಎಲ್ ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಾಗಿದ್ದು, ನಕಲಿ ಖಾತೆಗಳನ್ನು ತೆರೆದ ಮೂಲಕ ವಂಚನೆಗೆ ಸಹಕಾರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಶಮೀಮ್ ಅಖ್ತರ್ (55) ಬಿಹಾರ ಮೂಲದವನು ಆಗಿದ್ದು, ದೂರುದಾರರನ್ನು ಮೋಸದ ಬಲೆಗೆ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಪೊಲೀಸರು ಸಾರ್ವಜನಿಕರಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ‘ಅತೀ ಲಾಭ’ ಜಾಹೀರಾತುಗಳನ್ನು ನಂಬಬೇಡಿ, ಅಧಿಕೃತವಲ್ಲದ ಟ್ರೇಡಿಂಗ್ ಆ್ಯಪ್‌ಗಳಲ್ಲಿ ಹಣ ಹೂಡಿಕೆ ಮಾಡಬೇಡಿ, ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ಅಪರಿಚಿತರಿಂದ ಬರುವ ಆರ್ಥಿಕ ಸಲಹೆಗಳನ್ನು ಪಾಲಿಸಬೇಡಿ ಎಂದು ಮನವಿ ಮಾಡಿದ್ದಾರೆ.