ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ 'ನಮ್ಮ ನಡೆ ಹಸಿರೆಡೆಗೆ'- "ಪರಿಸರಕ್ಕಾಗಿ ನಾವು":" ಮಕ್ಕಳ ಪರಿಸರ ಸಂಭ್ರಮ": "ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ": ಹಸಿರು ಪರಿಸರ ನಿರ್ಮಾಣಕ್ಕೆ ಸಂಕಲ್ಪ ಅಗತ್ಯ: ಶಾಸಕ ಡಾ ಮಂತರ್ ಗೌಡ
ಕುಶಾಲನಗರ, ಜು.3 : ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗೆ ಹಾಗೂ ನಾಳೆಯ ಉತ್ತಮ ಭವಿಷ್ಯಕ್ಕಾಗಿ ಹಸಿರು ಪರಿಸರ ನಿರ್ಮಾಣ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಹೇಳಿದರು.
ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗ ಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ , ಎನ್ನೆಸ್ಸೆಸ್ ಮತ್ತು ಎಸ್.ಡಿ.ಎಂ.ಸಿ.ಯ ಸಹಯೋಗದಲ್ಲಿ "ನಮ್ಮ ನಡೆ ಹಸಿರೆಡೆಗೆ": " "ಪರಿಸರಕ್ಕಾಗಿ ನಾವು- ಮಕ್ಕಳ ಪರಿಸರ ಸಂಭ್ರಮ:2026": ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಗಿಡನೆಟ್ಟು ಹಸಿರು ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಪರಿಸರ ಸಂರಕ್ಷಣೆಗೆ ನಾವು ನೀಡಬೇಕಾದ ಮಹತ್ವ ಕುರಿತು ಮಾತನಾಡಿದರು.
ನಾವು ಸ್ವಚ್ಛ, ಸುಂದರ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಶ್ರಮಿಸಬೇಕು.ನಾವು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡೋಣ. ಇಂದು ನಾವು ಪ್ರಕೃತಿಯನ್ನು ಕಾಪಾಡಿದರೆ, ನಾಳೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ಎಂದರು. ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮ ಜವಾಬ್ದಾರಿ. ಹಸಿರು ಭೂಮಿಗಾಗಿ, ಸ್ವಚ್ಛ ಪರಿಸರಕ್ಕಾಗಿ ಹಾಗೂ ಸುಸ್ಥಿರ ಪರಿಸರಕ್ಕಾಗಿ ಪರಿಸರ ದಿನವನ್ನು ಪ್ರತಿನಿತ್ಯವೂ ಆಚರಿಸಬೇಕು ಎಂದು ಡಾ ಮಂತರ್ ಗೌಡ ಹೇಳಿದರು.
ಜೀವನದುದ್ದಕ್ಕೂ ಹಸಿರನ್ನೇ ಉಸಿರಾಗಿಸಿಕೊಂಡು ಸದಾ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಟಿ.ಜಿ.ಪ್ರೇಮಕುಮಾರ್ ಅವರಲ್ಲಿರುವ ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಡಾ ಮಂತರ್ ಗೌಡ ಕರೆ ನೀಡಿದರು.
ವಿದ್ಯಾರ್ಥಿಗಳು ಪ್ರೇಮಕುಮಾರ್ ಅವರಂತೆ ತಮ್ಮನ್ನು ಪರಿಸರದ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪರಿಸರ ಸಂರಕ್ಷಣೆಯ ಜಾಗೃತಿ ಆಂದೋಲನ ಕುರಿತ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಜೀವನವನ್ನು ಒದಗಿಸಲು ಹಾಗೂ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಟಿ.ಜಿ.ಪ್ರೇಮಕುಮಾರ್ ಅವರು ತಮ್ಮ ವೃತ್ತಿ ಬದುಕಿನೊಂದಿಗೆ ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ವಿಜ್ಞಾನ ಜನಪ್ರಿಯಗೊಳಿಸುವುದರೊಂದಿಗೆ ಸದಾ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಮೆಚ್ಚುಗೆಯ ಸಂಗತಿ.ಮುಂದಿನ ದಿನಗಳಲ್ಲಿ ಸಾಲುಮರದ ತಿಮ್ಮಕ್ಕ ಅವರಂತೆ ಜನರಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ನೆಟ್ಟು ಬೆಳೆಸವ ಕಾರ್ಯದಲ್ಲಿ ತೊಡಗಿಸಿಕೊಂಡು ಪರಿಸರ ಜಾಗೃತಿ ಮೂಡಿಸಲಿ ಎಂದರು.
ಮಕ್ಕಳ ಪರಿಸರ ಸಂಭ್ರಮ: 2026 ರ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ಪಿ.ರಮೇಶ್, ನಮ್ಮ ಜೀವನದ ಅವಿಭಾಜ್ಯ ಅಂಶವಾಗಿರುವ ಪರಿಸರವನ್ನು * ಉತ್ತಮ ಭವಿಷ್ಯಕ್ಕಾಗಿ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರೂ ಆದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರು ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ವಿಜ್ಞಾನ ಪರಿಷತ್ ಸಂಘಟನೆ ಮೂಲಕ ಶಾಲಾ- ಕಾಲೇಜುಗಳು ಹಾಗೂ ಸಮುದಾಯದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಕ್ರಿಯಾಶೀಲ ಚಟುವಟಿಕಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಕುಟ್ಟದಿಂದ ಹಿಡಿದು ಕೊಡ್ಲಿಪೇಟೆ ವರೆಗೆ ಅರಣ್ಯ ಜನನ ಗಿಡಗಳನ್ನು ನೆಟ್ಟು ಬೆಳೆಸುವಲ್ಲಿ ಜನತೆಯಲ್ಲಿ ಪರಿಸರ ಪ್ರೇಮ ಮೂಡಿಸಿದ ಕೀರ್ತಿ ಪ್ರೇಮ ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
"ಪರಿಸರಕ್ಕಾಗಿ ನಾವು" ಕಾರ್ಯಕ್ರಮದ ಉದ್ದೇಶ ಹಾಗೂ ಮಕ್ಕಳು ಪರಿಸರ ಪ್ರೇಮ ಬೆಳೆಸಿಕೊಳ್ಳುವ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಪರಿಸರ ಕಾರ್ಯಕ್ರಮಗಳ ಸಂಘಟಕರೂ ಆದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರವೇ ಜೀವ, ಪರಿಸರವೇ ನಮ್ಮ ಉಸಿರು! ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹಾಗೂ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿಧೆ.ವಿದ್ಯಾರ್ಥಿಗಳು ಪರಿಸರ ಚಟುವಟಿಕೆಗಳಲ್ಲಿ ತೊಡಗಿ ಭವಿಷ್ಯದಲ್ಲಿ ಪರಿಸರ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದರು.
ವೈಜ್ಞಾನಿಕ ಮನೋಭಾವ ಬೆಳವಣಿಗೆ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ , ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಶಾಲೆಯಂಗಳದಲ್ಲಿ ಗಿಡ ನೆಟ್ಟು ಪೋಷಿಸಿ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಕ್ಕಳಲ್ಲಿ ನಿರಂತರವಾಗಿ ವಿಜ್ಞಾನದ ಆಸಕ್ತಿ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸದಾ ತಮ್ಮನ್ನು ಮುಡಿಪಾಗಿರಿಸಿಕೊಂಡಿರುವ ಟಿ.ಜಿ.ಪ್ರೇಮಕುಮಾರ್ ಅವರ ಪರಿಸರ ಕಾಳಜಿಗೆ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ವತಿಯಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.
ಪರಿಸರ ಪ್ರೇಮಿ, ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಜಿ.ಪ್ರೇಮಕುಮಾರ್ ಅವರ ಪರಿಸರ ಕಾಳಜಿ ಕುರಿತು ಹೊರತರುತ್ತಿರುವ "ಪರಿಸರ ಪಯಣ" ಎಂಬ ಅಭಿನಂದನಾ ಗ್ರಂಥದ ವರ್ಣಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪಿ.ಕೇಶವ ಕಾಮತ್ , ಸದಾ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಟಿ.ಜಿ. ಪ್ರೇಮಕುಮಾರ್ ಅವರು ಕಳೆದ ಮೂರು ದಶಕಗಳಿಂದ ಮಕ್ಕಳಲ್ಲಿ ಪರಿಸರ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ವೈವಿಧಯಮಯ ಚಟುವಟಿಕೆಗಳೊಂದಿಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ ಎಂದರು.
ತಮ್ಮ ವೃತ್ತಿ ಬದುಕಿನೊಂದಿಗೆ ತಮ್ಮನ್ನು ಸಾಹಿತ್ಯ ಚಟುವಟಿಕೆಗಳ ಜತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಸೇವೆ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ವಿಜ್ಞಾನ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ದೃಷ್ಟಿಕೋನ ಬೆಳೆಸುವಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯವಾದುದು ಎಂದರು.
ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯ ಪ್ರಾಂಶುಪಾಲರಾದ ರಾಮಚಂದ್ರರಾಜೇ ಅರಸ್, ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದ ಕುರಿತು ಸಾಹಿತಿ ಡಾ ಜೆ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಪ್ರವಾಸೋದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಮಕ್ಕಳ ಪರಿಸರ ಸಂಭ್ರಮಕ್ಕೆ ಸಹಕರಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜೆ.ಕುಮಾರ್, ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷೆ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದ ಭರಮಣ್ಣ ಬಿ.ಬೆಟಗೇರಿ ಮತ್ತು ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.
ಕುಶಾಲನಗರ ಕೈಗಾರಿಕೋದ್ಯ ಮಿಗಳ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ , ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿಯ ಸಂಪಾದಕರೂ ಆದ ಸಾಹಿತಿ ಡಾ ಜೆ.ಸೋಮಣ್ಣ, ಪ್ರಮುಖರಾದ ಇ.ಸುಲೇಮಾನ್, ಮೆ.ನಾ.ವೆಂಕಟನಾಯಕ್, ಟಿ.ಬಿ.ಮಂಜುನಾಥ್, ಕೆ.ವಿ.ಉಮೇಶ್, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಪವನ್ ಕುಮಾರ್, ವಿಜ್ಞಾನ ಪರಿಷತ್ತಿನ ಸದಸ್ಯರಾದ ಎಂ.ಕೆ.ನಾಗರಾಜ್, ಆರ್.ಜಿ.ಮಹಾದೇವಸ್ವಾಮಿ, ಎನ್. ಮಹಾದೇವಪ್ಪ, ಎಚ್.ಎಸ್.ಗುರುಸ್ವಾಮಿ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಮುಖರಾದ ಎಚ್.ಆರ್.ಮುತ್ತಪ್ಪ, ಟಿ.ಎಂ.ಮುದ್ದಯ್ಯ, ಕೆ.ಯು.ರಂಜಿತ್, ಸಿ.ಎಂ.ಸುಲೋಚನಾ, ಯು.ಸಿ.ದಮಯಂತಿ, ಗ್ರಾಮದ ಮುಖಂಡರಾದ ಕೆ.ಎಸ್.ರಾಜಾಚಾರಿ, ಜವರೇಗೌಡ, ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್, ಜಿಲ್ಲಾ ಪಿಯೂ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗಪ್ಪ ಯಾಲಕ್ಕಿಕಟ್ಟೆ,ಮಾಜಿ ಆದ್ಯಕ್ಷ ಫಿಲಿಪ್ ವಾಸ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಈರಪ್ಪ, ಎಸ್.ಎನ್.ಪುಟ್ಟಸ್ವಾಮಿ, ಜವರಯ್ಯ, ಸಹಕಾರಿಗಳಾದ ಕೆ.ಎಸ್.ಕೃಷ್ಣೇಗೌಡ, ಟಿ.ಬಿ.ಜಗದೀಶ್, ಟಿ.ಕೆ.ಪಾಂಡುರಂಗ, ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಪರಿಸರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಸಂದೇಶಗಳನ್ನು ಹೊಂದಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಪರಿಸರ ಜಾಗೃತಿ ಮೂಡಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ಉಸಿರು, ಜಲವೇ ಜೀವಜಾಲ, ಗಿಡನೆಟ್ಟು ಪರಿಸರ ಸಂರಕ್ಷಿಸಿ, ನೆಲ-ಜಲ ಸಂರಕ್ಷಿಸಿ ಜೀವ- ವೈವಿಧ್ಯ ಸಂರಕ್ಷಿಸಿ ಎಂಬಿತ್ಯಾದಿ ಪರಿಸರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪರಿಸರ ಘೋಷಣೆಗಳನ್ನು ಕೂಗಿ ಪ್ರೇಕ್ಷಕರ ಗಮನ ಸೆಳೆದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

