ಪಾರಾಣೆ:ನೂತನ ಪೆವಿಲಿಯನ್ ಕಟ್ಟಡ ಉದ್ಘಾಟನೆ

ಪಾರಾಣೆ:ನೂತನ ಪೆವಿಲಿಯನ್ ಕಟ್ಟಡ ಉದ್ಘಾಟನೆ

ವಿರಾಜಪೇಟೆ:ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ, ಪಾರಾಣೆಯ ಕ್ರೀಡಾಂಗಣಕ್ಕೆ, ಶಾಸಕರ ಅನುದಾನದ ₹ 20 ಲಕ್ಷಗಳಲ್ಲಿ, ನೂತನವಾಗಿ ನಿರ್ಮಾಣಗೊಂಡ ಪೆವಿಲಿಯನ್ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಹಾಗೂ ಕೇಂದ್ರ ಕ್ರೀಡಾ ಮಂಡಳಿಯ ಗ್ರಾಮಾಂತರ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಭಾಗವಹಿಸಿದರು.

ಮೊದಲಿಗೆ ನೂತನ ಪೆವಿಲಿಯನ್ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮಾನ್ಯ ಶಾಸಕರು, ಕ್ರೀಡೆಯ ಪ್ರೋತ್ಸಾಹಕ್ಕೆ ಹಾಗೂ ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಲು ಪ್ರೇಕ್ಷಕರ ಅಗತ್ಯತೆ ತುಂಬಾ ಮುಖ್ಯ. ಕ್ರೀಡೆಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುಕೂಲವಾಗಲೆಂದು ಈ ಪೆವಿಲಿಯನ್ ಕಟ್ಟಡದ ನಿರ್ಮಾಣವಾಗಿದ್ದು, ಇದರ ಸದುಪಯೋಗವನ್ನು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

 ಕ್ಷೇತ್ರದಲ್ಲಿನ ಆಟದ ಮೈದಾನಗಳಿಗೆ ಹಾಗೂ ಕ್ರೀಡಾ ಅಭಿವೃದ್ಧಿಗೆ ತಾನು ಸರಕಾರದಿಂದ ಅನೇಕ ಯೋಜನೆಗಳನ್ನು ತಂದಿದ್ದು, ಇದರಲ್ಲಿ ಕ್ರೀಡಾ ತರಬೇತಿ ಕೇಂದ್ರ, ಕ್ರೀಡಾ ವಸತಿ ನಿಲಯಗಳ ನಿರ್ಮಾಣ ಹಾಗೂ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದಾಗಿ ಹೇಳಿದರು. ಇಂತಹ ಕ್ರೀಡಾಂಗಣಗಳು ಸ್ಥಳೀಯ ಕ್ರೀಡಾ ಪ್ರತಿಭೆಗಳ ಏಳಿಗೆಗೆ ಸಹಕಾರಿಯಾಗಲಿದ್ದು ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.

ಬಳಿಕ ಗ್ರಾಮಾಂತರ ಕ್ರೀಡಾಕೂಟಕ್ಕೆ ಶುಭಕೋರಿದ ಮಾನ್ಯ ಶಾಸಕರು, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡೆಯನ್ನು ಪೋಷಿಸಿ ಬೆಳೆಸುವುದಕ್ಕೆ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಬೊಳ್ಳಂಡ ಶೇರಿ ಗಿರೀಶ್, ವಲಯ ಅಧ್ಯಕ್ಷರು ದಿಲೀಪ್, ನಾಪೋಕ್ಲು ಪ್ರಚಾರ ಸಮಿತಿಯ ಬಲ್ಯಾಟಂಡ ಕೌಶಿಕ್, ನಾಯಕಂಡ ಕುಂಜಣ್ಣ ಕ್ರೀಡಾ ಮಂಡಳಿ ಅಧ್ಯಕ್ಷರು ಸಾಬ ದೇವಯ್ಯ, ಪಂಚಾಯಿತಿ ಅಧ್ಯಕ್ಷರು ಕಟ್ಟಿ ಕುಶಾಲಪ್ಪ, ದತ್ತಿ ನಿಧಿ ಅಧ್ಯಕ್ಷರು ದೀಪು ಚಂಗಪ್ಪ ,ಕಾರ್ಯದರ್ಶಿ ರಾಜೇಶ್ ಮುದ್ದಪ್ಪ, ಸುರೇಶ್, ಅಜ್ಜಿಕುಟ್ಟಿರ ಗಿರೀಶ್, ಮನು, ಬಟ್ಟಕಳ್ಳಂಡ ರಾಜ, ಮುತ್ತಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.