ಪೋಷಕ-ಶಿಕ್ಷಕ ಸಂಘದ ಸಭೆ: ನೀಟ್ ಪರೀಕ್ಷೆ ಬಗ್ಗೆ ಮಾಹಿತಿ ಕಾರ್ಯಾಗಾರ
ಪೊನ್ನಂಪೇಟೆ, ಜು.6 : ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪೋಷಕ-ಶಿಕ್ಷಕ ಸಂಘದ ಸಭೆ ಹಾಗೂ ಸಿಇಟಿ ಪರೀಕ್ಷೆ ತರಬೇತಿಯ ಅಗತ್ಯತೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಬ್ರಾಹ್ಮಿ ವಿದ್ವತ್ ಅಕಾಡೆಮಿಯ ಸಿ.ಇ.ಟಿ. ಹಾಗೂ ನೀಟ್ ತರಬೇತಿ ವಿಭಾಗದ ಸಂಯೋಜಕ ಅರುಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿ.ಇ.ಟಿ. ಮತ್ತು ನೀಟ್ ಪರೀಕ್ಷೆಗಳ ಮಹತ್ವ, ಅಧ್ಯಯನದ ವೈಜ್ಞಾನಿಕ ವಿಧಾನಗಳು, ಸಮಯದ ಸಮರ್ಪಕ ನಿರ್ವಹಣೆ ಹಾಗೂ ಯಶಸ್ಸು ಸಾಧಿಸಲು ಅನುಸರಿಸಬೇಕಾದ ತಂತ್ರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. NEET ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 500ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದರೆ ವೈದ್ಯಕೀಯ (MBBS) ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಹೆಚ್ಚಿರುತ್ತದೆ ಎಂದು ವಿವರಿಸಿದರು.
200–500 ಅಂಕಗಳ ನಡುವೆ ಪಡೆದ ವಿದ್ಯಾರ್ಥಿಗಳಿಗೆ ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಪಿ, ನ್ಯೂಟ್ರಿಷನ್, ಡೆಂಟಲ್, ಆಯುರ್ವೇದ, ಹೋಮಿಯೋಪಥಿ, ವೆಟರ್ನರಿ ಸೇರಿದಂತೆ ಹಲವು ಪ್ಯಾರಾಮೆಡಿಕಲ್ ಕೋರ್ಸ್‌ಗಳಲ್ಲಿ ಅವಕಾಶಗಳಿವೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಎರಡೂ ವರ್ಷಗಳು ಸಮಾನ ಮಹತ್ವ ಹೊಂದಿದ್ದು, ಮೊದಲ ವರ್ಷದ ಪಠ್ಯವನ್ನು ಎರಡನೇ ವರ್ಷದಲ್ಲಿ ನಿರಂತರವಾಗಿ ಪುನರಾವರ್ತನೆ ಮಾಡಬೇಕು. ಬೋರ್ಡ್ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎರಡಕ್ಕೂ ಸಮಾನವಾಗಿ ಸಿದ್ಧತೆ ನಡೆಸುವುದು ಯಶಸ್ಸಿನ ಗುಟ್ಟು ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಪೋಷಕರು ಹಾಗೂ ನಿವೃತ್ತ ಪ್ರಾಂಶುಪಾಲರಾದ ತಾತಂಡ ಜ್ಯೋತಿ ಪ್ರಕಾಶ್ ಅವರು ಮಾತನಾಡಿ ವಿದ್ಯಾರ್ಥಿ ಜೀವನವು ಪ್ರತಿಯೊಬ್ಬರ ಬದುಕಿನ ಮಹತ್ವದ ತಿರುವಾಗಿದ್ದು, ಈ ಹಂತದಲ್ಲಿ ಶೇ.100ರಷ್ಟು ಶ್ರಮ ಮತ್ತು ಏಕಾಗ್ರತೆ ತೋರಿದರೆ ಭವಿಷ್ಯ ಉಜ್ವಲವಾಗುತ್ತದೆ. ಹದಿಹರೆಯದ ಅವಧಿಯು ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಹಂತವಾಗಿದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಭವಿಷ್ಯದ ಮೇಲೆ ಪರಿಣಾಮ ಬೀರುವುದರಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಾಕಷ್ಟು ಚಿಂತನೆ ಮಾಡಬೇಕು.
ಸಮಸ್ಯೆಗಳು ಎದುರಾದರೆ ಮುಚ್ಚಿಡದೆ ಪೋಷಕರು ಹಾಗೂ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮದ್ಯಪಾನ, ಮಾದಕ ವಸ್ತುಗಳು, ಧೂಮಪಾನ ಹಾಗೂ ಅನಗತ್ಯ ಸಂಬಂಧಗಳಿಂದ ದೂರವಿದ್ದು ಗುರಿಯತ್ತ ಗಮನಹರಿಸಬೇಕು. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ವಿದ್ಯಾಭ್ಯಾಸಕ್ಕೂ ಸಮಾನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿ ಜೀವನವನ್ನು ಸಮತೋಲನದಿಂದ ಸಾಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ಎಸ್. ಎಸ್. ಮಾದಯ್ಯ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರು ಮತ್ತು ಶಿಕ್ಷಕರ ಪರಸ್ಪರ ಸಹಕಾರ ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿಗಳ ಕಲಿಕೆ, ವ್ಯಕ್ತಿತ್ವ ವಿಕಾಸ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಪೋಷಕ-ಶಿಕ್ಷಕ ಸಂಘವು ಪ್ರಮುಖ ವೇದಿಕೆಯಾಗಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕುರಿತು ನಿರಂತರವಾಗಿ ಗಮನಹರಿಸಬೇಕು ಎಂದು ತಿಳಿಸಿದರು. ಈ ಸಂದರ್ಭ ಪೋಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ರೇಷ್ಮ, ಸಂಚಾಲಕ ಲೆಫ್ಟಿನೆಂಟ್ ಅಕ್ರಂ, ಉಪನ್ಯಾಸಕರಾದ ಜೆಸಿಂತಾ, ಚೇತನ್ ಚಿಣ್ಣಪ್ಪ, ಜಶ್ಮೀ, ಕರೀಷ್ಮಾ ಹಾಗೂ ಯಶೋದ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ವಿಭಾಗದ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

