State News

ದೂರು ನೀಡಲು ಬಂದವಳನ್ನೇ ಪಟಾಯಿಸಿದ ಪೊಲೀಸ್

admincoorgdaily

Photo credit: TV09

ವಿಜಯಪುರ, ಡಿ. 27: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ವಿವಾಹಿತ ಮಹಿಳೆಯೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರು ಅನೈತಿಕ ಸಂಬಂಧ ಬೆಳೆಸಿದ್ದಾರೆ ಎಂಬ ಗಂಭೀರ ಆರೋಪ ವಿಜಯಪುರ ಜಿಲ್ಲೆಯಲ್ಲಿ ಕೇಳಿಬಂದಿದೆ. ಈ ಸಂಬಂಧ ಮಹಿಳೆಯ ಪತಿ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದು, ಪ್ರಕರಣದ ತನಿಖೆ ಆರಂಭವಾಗಿದೆ.

ಭೀಮಾಶಂಕರ ಹೋಳ್ಕರ ಎಂಬವರು ನೀಡಿರುವ ದೂರಿನ ಪ್ರಕಾರ, ಹತ್ತು ವರ್ಷಗಳ ಹಿಂದೆ ಕೊಲ್ಹಾರ ಪಟ್ಟಣದ ಅನುರಾಧ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಗಂಡು ಹಾಗೂ ಹೆಣ್ಣು ಮಕ್ಕಳಿದ್ದಾರೆ. ವಿವಾಹದ ಐದು ವರ್ಷಗಳ ಬಳಿಕ ದಾಂಪತ್ಯ ಕಲಹ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಅನುರಾಧ ಅವರು ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆ ವೇಳೆ ಠಾಣೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಮನೋಹರ್ ಕಂಚಗಾರ ಅವರು ವಿಚಾರಣೆ ನೆಪದಲ್ಲಿ ಮಹಿಳೆಯ ಸಂಪರ್ಕ ಸಂಖ್ಯೆ ಪಡೆದುಕೊಂಡಿದ್ದು, ಬಳಿಕ ಇಬ್ಬರ ನಡುವೆ ನಿರಂತರ ಸಂಪರ್ಕ ಬೆಳೆದು ಅದು ಅನೈತಿಕ ಸಂಬಂಧಕ್ಕೆ ತಿರುಗಿದೆ ಎಂದು ಭೀಮಾಶಂಕರ ಆರೋಪಿಸಿದ್ದಾರೆ.

2023ರಲ್ಲಿ ಕೆಲಸದ ನಿಮಿತ್ತ ಭೀಮಾಶಂಕರರು ಪತ್ನಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಬಂದ ಹಣದಿಂದ ಬೆಂಗಳೂರಿನಲ್ಲಿ ಮನೆ ಖರೀದಿಸಿದರೂ, ದಾಂಪತ್ಯದಲ್ಲಿ ಒಗ್ಗಟ್ಟು ಕಂಡುಬರಲಿಲ್ಲ. ಸಣ್ಣ ವಿಚಾರಗಳಿಗೂ ಪೊಲೀಸ್ ಠಾಣೆ ಮೆಟ್ಟಿಲೇರಿಸುವುದು ಸಾಮಾನ್ಯವಾಗಿದ್ದು, ಇದರ ಹಿಂದೆ ಪೊಲೀಸ್ ಅಧಿಕಾರಿಯ ಪ್ರಭಾವವಿದೆ ಎಂಬ ಅನುಮಾನಗಳು ನಂತರ ಗಟ್ಟಿಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತ್ನಿ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ಸಂಬಂಧದ ವಿಚಾರ ತಿಳಿದ ನಂತರ ಭೀಮಾಶಂಕರರು ಮಕ್ಕಳನ್ನು ಪತ್ನಿಯ ಬಳಿಯೇ ಬಿಟ್ಟು ಊರಿಗೆ ಮರಳಿದ್ದರು. ಆದರೆ ಕೆಲ ದಿನಗಳ ಬಳಿಕ ಅಪ್ರಾಪ್ತ ಪುತ್ರನು ದೂರವಾಣಿ ಮೂಲಕ ಸಂಪರ್ಕಿಸಿ, ತಾಯಿಯೊಂದಿಗೆ ಇರುವ ವ್ಯಕ್ತಿಯನ್ನು ‘ತಂದೆ’ ಎಂದು ಕರೆಯುವಂತೆ ಒತ್ತಡ ಹೇರಲಾಗುತ್ತಿದೆ; ನಿರಾಕರಿಸಿದರೆ ಹಲ್ಲೆ ಮಾಡಿ ಹಿಂಸೆ ನೀಡಲಾಗಿದೆ ಎಂದು ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಭೀಮಾಶಂಕರರು ಬೆಂಗಳೂರಿಗೆ ತೆರಳಿ ಮಗುವನ್ನು ಕುಂಬಳಗೋಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ. ಪೊಲೀಸರು ನಡೆಸಿದ ಕೌನ್ಸಲಿಂಗ್ ವೇಳೆ ಮಹಿಳೆ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ. ಬಳಿಕ ಭೀಮಾಶಂಕರರು ಮಗುವನ್ನು ತಮ್ಮ ಜೊತೆಗೆ ಕರೆದುಕೊಂಡು ಬಂದಿದ್ದಾರೆ.

ಆಲಮೇಲದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಮನೋಹರ್ ಕಂಚಗಾರರಿಗೆ ಇತ್ತೀಚೆಗೆ ಪದೋನ್ನತಿ ದೊರೆತು, ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ನಿಯೋಜನೆಗೊಂಡಿದ್ದಾರೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.