ಶರಣ ಸಾಹಿತ್ಯ ಸಮ್ಮೇಳನ ಸಿದ್ದತೆಗಳ ಪೂರ್ವ ಭಾವಿ ಸಭೆ

ಶರಣ ಸಾಹಿತ್ಯ ಸಮ್ಮೇಳನ ಸಿದ್ದತೆಗಳ ಪೂರ್ವ ಭಾವಿ ಸಭೆ

ಕುಶಾಲನಗರ : ಕುಶಾಲನಗರದಲ್ಲಿ ಜೂನ್ 23 ರಂದು ಹಮ್ಮಿಕೊಂಡಿರುವ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳ ಕುರಿತಾದ ಪೂರ್ವಭಾವಿ ಸಭೆ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರಾದ ಹೆಚ್.ವಿ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕುಶಾಲನಗರದಲ್ಲಿ ನಡೆಯಿತು.

 ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಪ್ರಥಮ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಮ್ಮೇಳನದ ಅಧ್ಯಕ್ಷರಾದ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಯವರನ್ನು ಅತ್ಯಂತ ಭಕ್ತಿ - ಶ್ರದ್ದೆ ಹಾಗೂ ಗೌರವಗಳಿಂದ ಸ್ವಾಗತಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಬೇಕು ಎಂದು ಶಿವಪ್ಪ ಕರೆಕೊಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲ್ಯಾನ್ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನ ಕುಶಾಲನಗರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಸಮ್ಮೇಳನಕ್ಕೆ ಅಗತ್ಯವಿರುವ ವಿವಿಧ ರೀತಿಯ ಸಹಕಾರಗಳನ್ನು ನೀಡುವುದಾಗಿ ಅವರು ಹೇಳಿದರು.

 ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಶರಣ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಕುಶಾಲನಗರ ಹಾಗೂ ಸುತ್ತಮುತ್ತಲಿನ ವಿವಿಧ ಸಂಘ-ಸಂಸ್ಥೆಗಳು ಹಾಗೂ ವಿವಿಧ ಸಮುದಾಯಗಳ ಸಹಭಾಗಿತ್ವ ಅತಿ ಮುಖ್ಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಎಸ್. ಮೂರ್ತಿ ಹೇಳಿದರು. ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು.

 ಕಾರ್ಯಕ್ರಮದ ಮೆರವಣಿಗೆಗೆ ಕುಶಾಲನಗರದ ವಿವಿಧ ಸಮಾಜಗಳ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಶರಣರ ಚಿಂತನೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಗಳು ಕೆಳ ವರ್ಗದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ತಲುಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಮೂಲ ಉದ್ದೇಶವಾಗಿದೆ ಎಂದು ಸಮ್ಮೇಳದ ಆರ್ಥಿಕ ಸಮಿತಿ ಅಧ್ಯಕ್ಷ ಶಾಂಬಶಿವಯ್ಯ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಿ. ನಟರಾಜು, ಜಿಲ್ಲಾ ಕೋಶಾಧಿಕಾರಿ ಕೆ.ಪಿ. ಪರಮೇಶ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಹಾಗೂ ಮೇಲ್ವಿಚಾರಕ ಸುಧೀರ್ ಸೇರಿದಂತೆ ಯೋಜನೆಯ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.