ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಯಲು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ:ಆರೋಗ್ಯ ನಿರೀಕ್ಷಕ ಮಂಜುನಾಥ್

ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಯಲು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ:ಆರೋಗ್ಯ ನಿರೀಕ್ಷಕ ಮಂಜುನಾಥ್

ಕುಶಾಲನಗರ:ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಿಸಿಕೊಂಡರೆ ಡೆಂಗ್ಯೂ ಜ್ವರ, ಇಲಿಜ್ವರ, ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಬರದಂತೆ ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ನಿರೀಕ್ಷಕ ಮಂಜುನಾಥ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಇಲ್ಲಿಗೆ ಸಮೀಪದ ಕೂಡಿಗೆ ಗ್ರಾಮದಲ್ಲಿ ಆಶಾ ಕಾರ್ಯಕರ್ತರು ನಡೆಸಿದ ಮನೆ ಮನೆ ಜ್ವರ ಸಮೀಕ್ಷೆ ಕಾರ್ಯಕ್ರಮದ ಸಂದರ್ಭ ಆರೋಗ್ಯ ಮಾಹಿತಿ ನೀಡಿದ ಅವರು, ಯಾವುದೇ ಜ್ವರವಿರಲಿ ಹತ್ತಿರದ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಸೋಮವಾರಪೇಟೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮಾತನಾಡಿ, ಮನೆಯ ಸುತ್ತಮುತ್ತ ಸ್ವಚ್ಛ ಪರಿಸರ ಶುದ್ಧ ನೀರು ಇರುವಂತೆ ನೋಡಿಕೊಳ್ಳಬೇಕು. ಚರಂಡಿಗಳಲ್ಲಿ ನೀರು ನಿಂತು ಲಾರ್ವ ಉತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕು ಎಂದರು. ಸಾಂಕ್ರಾಮಿಕ ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಆರೋಗ್ಯ ಮಾಹಿತಿ ನೀಡಿದರು .ಡೆಂಗ್ಯೂ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಿಂದ ಎಲ್ಲೆಡೆ ಮನೆ ಮನೆ ಭೇಟಿ ಮಾಡಿ ಲಾರ್ವ ನಿರ್ಮೂಲನೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು ಎಲ್ಲರೂ ಸಹಕರಿಸಿದರೆ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು. ಹಾಗೂ ಸ್ವಚ್ಛತೆಯಿಂದ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಬಹುದು ಮನೆಯ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಮನೆಯ ಒಳಗೆ ಹಾಗೂ ಹೊರಗೆ ನೀರು ತುಂಬಿಸುವ ತಾಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಮುಚ್ಚಳದಿಂದ ಮುಚ್ಚಬೇಕು ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೊಳ್ಳೆ ನಾಶಕ ಮತ್ತು ಸೊಳ್ಳೆ ಪರದೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೂಡಿಗೆ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಶ್ ರವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಇದ್ದರು.