ಆಸ್ತಿ ವಿವಾದ: ಅಣ್ಣನಿಂದಲೇ ತಮ್ಮನ ಹತ್ಯೆ:ತಾಯಿಯ ಹೇಳಿಕೆಯಿಂದ ಬಯಲಾಯಿತು ಜಾರಿಬಿದ್ದ ರಹಸ್ಯ

ಆಸ್ತಿ ವಿವಾದ: ಅಣ್ಣನಿಂದಲೇ ತಮ್ಮನ ಹತ್ಯೆ:ತಾಯಿಯ ಹೇಳಿಕೆಯಿಂದ ಬಯಲಾಯಿತು  ಜಾರಿಬಿದ್ದ ರಹಸ್ಯ
Photo credit: TV09 (ಫೋಟೋ:ಬಂಧಿತ ಆರೋಪಿ)

ಚಿಕ್ಕೋಡಿ, ಜ. 1: ಆಸ್ತಿ ವಿಚಾರದಲ್ಲಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಅಣ್ಣನೊಬ್ಬ ತನ್ನದೇ ತಮ್ಮನನ್ನು ಹತ್ಯೆಗೈದು, ಅದನ್ನು ಸಹಜ ಸಾವೆಂದು ಬಿಂಬಿಸಲು ಯತ್ನಿಸಿದ್ದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ಸಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತನ ತಾಯಿ ನೀಡಿದ ಹೇಳಿಕೆಯ ಆಧಾರದಲ್ಲಿ ಪೊಲೀಸರು ಪ್ರಕರಣವನ್ನು ಮರುತೆರೆದು ಆರೋಪಿಯನ್ನು ಬಂಧಿಸಿದ್ದಾರೆ.

ಡಿ.18ರಂದು ಬಸಲಿಂಗ ರಾಮಾಪುರೆ (38) ಮೃತಪಟ್ಟಿದ್ದು, ಹಂಚು ಹಾಕುವ ವೇಳೆ ಜಾರಿ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದು ಸಾವಿಗೆ ಕಾರಣವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನು ಪುನಃ ವಿಚಾರಣೆ ನಡೆಸಿದ ಪೊಲೀಸರು, ಬಸಲಿಂಗನ ತಾಯಿ ರತ್ನವ್ವ ಅವರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದಾಗ ಘಟನೆಗೆ ಸಂಬಂಧಿಸಿದ ನಿಜಾಂಶ ಹೊರಬಂದಿದೆ. ನಾಲ್ಕು ಎಕರೆ ಜಮೀನಿನ ಹಂಚಿಕೆ ವಿಚಾರವಾಗಿ ಬಸಲಿಂಗ ಮತ್ತು ಆತನ ಸಹೋದರ ಸಿದ್ದಪ್ಪ ರಾಮಾಪುರೆ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ತನಿಖೆಯ ಪ್ರಕಾರ, ಆಸ್ತಿ ವಿಚಾರವಾಗಿ ಬಸಲಿಂಗ ಅಣ್ಣನ ಮನೆಗೆ ಬಂದಿದ್ದ ಸಂದರ್ಭದಲ್ಲಿ ದನದ ಕೊಟ್ಟಿಗೆಯಲ್ಲಿ ಸಿದ್ದಪ್ಪ ಕಟ್ಟಿಗೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಬಸಲಿಂಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬಸಲಿಂಗನ ತಾಯಿ ಹಾಗೂ ಪತ್ನಿ ವೀಣಾ ಎದುರೇ ನಡೆದಿದ್ದು, ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಪತ್ನಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ದಾಖಲಾಗಿದೆ.

ತಾಯಿಯ ಹೇಳಿಕೆಯ ಆಧಾರದ ಮೇಲೆ ಪ್ರಕರಣವನ್ನು ಮರುತೆರೆದು ತನಿಖೆ ನಡೆಸಿದ ಪೊಲೀಸರು ಆರೋಪಿ ಸಿದ್ದಪ್ಪನನ್ನು ಬಂಧಿಸಿದ್ದಾರೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.