ನಿವೇಶನಕ್ಕೆ ಆಗ್ರಹಿಸಿ ಮೇ.01ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ
ಮಡಿಕೇರಿ: ಭೂಮಿ-ವಸತಿ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆ ನಿವೇಶನಕ್ಕೆ ಆಗ್ರಹಿಸಿ ಮೇ.೧ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಗೌರವ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಹೇಳಿದರು.
ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಂದ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ಇದಾಗಿದೆ. ತಿಂಗಳೊಳಗೆ ತೀರ್ಮಾನ ಮಾಡದೇ ಇದ್ದರೆ ಮಾಡು ಇಲ್ಲವೇ ಮಡಿ ಚಳವಳಿ ಹಮ್ಮಿಕೊಳ್ಳಲಾಗುತ್ತದೆ. ಇದರ ಭಾಗವಾಗಿ ಮೇ೧ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದು ರಾಜ್ಯದ ಬಗರ್ ಹುಕುಂ ಸಾಗುವಳಿದಾರರ ಅಂತಿಮ ತೀರ್ಮಾನವಾಗಿದೆ. ಏಕೆಂದರೆ ಇಲ್ಲಿಯವರೆಗೂ ಹಲವು ಸರ್ಕಾರಗಳು ಸುಳ್ಳು ಭರವಸೆ ಬಿಟ್ಟರೆ ಏನನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಹಕ್ಕು ಪ್ರತಿಪಾದಿಸುತ್ತಿರುವವರು, ಭೂಮಿಯ ಹಕ್ಕಿಗಾಗಿ ೫ ದಶಕಗಳ ಕಾಲದಿಂದಲೂ ಕಾಯುತ್ತಿದ್ದಾರೆ. ಅದೇ ರೀತಿ ವಸತಿ ವಂಚಿತರು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆತ್ತಿಯ ಮೇಲೊಂದು ಸೂರಿಗಾಗಿ ಕಾಯುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಧ್ಯಕ್ಷ ಅಮಿನ್ ಮೋಯಿಸಿನ್, ಕಾರ್ಯದರ್ಶಿ ಮೊಣ್ಣಪ್ಪ, ಸದಸ್ಯ ಎಚ್.ಜೆ.ಪ್ರಕಾಶ್ ಇದ್ದರು.