Kodagu

ಮನೆಯ ಮೇಲೆ ಕಾಡಾನೆ ದಾಳಿ: ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು

admincoorgdaily

ಮನೆಯ ಮೇಲೆ ಕಾಡಾನೆ ದಾಳಿ: ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು

ಸಿದ್ದಾಪುರ :- ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರೇಷ್ಮೆ ಹಾಡ್ಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ನಿವಾಸಿಗಳು ಆತಂಕಕ್ಕೊಳಗಾದ ಘಟನೆ ಗುರುವಾರ ಮುಂಜಾನೆ ನಡೆದಿದೆ.

 ಗ್ರಾಮದ ನಿವಾಸಿ ಪಿ.ಸಿ. ಪಾಪು ಅವರ ಮನೆಗೆ ಬೆಳಿಗ್ಗೆ ಸುಮಾರು 5.30 ಗಂಟೆ ವೇಳೆಗೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ಮನೆಯ ಸಮೀಪ ಬಂದು ಗೋಡೆ ಹಾಗೂ ಮನೆಯ ಭಾಗಕ್ಕೆ ಹಾನಿ ಉಂಟುಮಾಡಿದ್ದು, ಮನೆಯೊಳಗಿದ್ದ ಪಾಪು ಹಾಗೂ ಅವರ ಕುಟುಂಬಸ್ಥರು ಎಚ್ಚರಗೊಂಡು ಸಮಯಪ್ರಜ್ಞೆಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಮನೆಯ ಕೆಲವು ಭಾಗಗಳಿಗೆ ಹಾನಿಯಾಗಿದ್ದು, ಕುಟುಂಬಸ್ಥರು ಭಯಭೀತರಾಗಿದ್ದಾರೆ. ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಹಾಗೂ ಶಾಶ್ವತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಕಾಡಾನೆಗಳ ಉಪಟಳ ತಡೆಗೆ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.