ಸಹಪಾಠಿಗಳಿಂದ ರ‍್ಯಾಗಿಂಗ್ | ವೃಷಣ ಕಳೆದುಕೊಂಡ ಬಾಲಕ

ಸಹಪಾಠಿಗಳಿಂದ ರ‍್ಯಾಗಿಂಗ್ | ವೃಷಣ ಕಳೆದುಕೊಂಡ ಬಾಲಕ

ಮೈಸೂರು, ನ.10: ನಗರದ ಜಯಲಕ್ಷ್ಮೀಪುರಂನಲ್ಲಿರುವ ಖಾಸಗಿ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದ ರ‍್ಯಾಗಿಂಗ್ ಮತ್ತು ಹಲ್ಲೆಯಿಂದ 8ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಒಂದು ವೃಷಣವನ್ನೇ ಕಳೆದುಕೊಂಡಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

ಸಹಪಾಠಿಗಳಿಂದ ನಿರಂತರವಾಗಿ ಹಲ್ಲೆ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದ ಬಾಲಕ ಶಿಕ್ಷಕರಿಗೆ ವಿಷಯ ತಿಳಿಸಿದ್ದ. ಇದೇ ಕೋಪದಿಂದ ಆತನ ಸಹಪಾಠಿಗಳ ಮೂವರು ಅಕ್ಟೋಬರ್ 25ರಂದು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಬಾಲಕನ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಗಂಭೀರ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ನೋವಿನಿಂದ ಬಳಲುತ್ತಿದ್ದ ಬಾಲಕ ಪೋಷಕರಿಗೆ ಘಟನೆ ತಿಳಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಪೋಷಕರು ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ತೀವ್ರ ಪೆಟ್ಟಿನ ಪರಿಣಾಮವಾಗಿ ವೈದ್ಯರು ಒಂದು ವೃಷಣವನ್ನು ತೆಗೆದುಹಾಕಬೇಕಾಯಿತು ಎಂದು ತಿಳಿದು ಬಂದಿದೆ.

ಘಟನೆಯು ಈಗ ತಡವಾಗಿ ಬಹಿರಂಗವಾಗಿದ್ದು, ಪೋಷಕರು ಶಾಲಾ ಆಡಳಿತದ ನಿರ್ಲಕ್ಷ್ಯವನ್ನೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. “ಮಗನ ಮೇಲೆ ನಡೆಯುತ್ತಿದ್ದ ರ‍್ಯಾಗಿಂಗ್ ಕುರಿತು ನಾವು ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಶಾಲೆಯವರು ಕ್ರಮ ಕೈಗೊಳ್ಳಲಿಲ್ಲ. ಈ ನಿರ್ಲಕ್ಷ್ಯದಿಂದ ಮಗನಿಗೆ ಜೀವನಪರ್ಯಂತ ನೋವು ಉಂಟಾಗಿದೆ,” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಷಕರ ಪ್ರಕಾರ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೂ ಶಾಲಾ ಆಡಳಿತ ಮಂಡಳಿ ಅಥವಾ ಶಿಕ್ಷಕರು ಬಾಲಕನ ಆರೋಗ್ಯ ವಿಚಾರಿಸಲು ಸಹ ಮುಂದೆ ಬಂದಿಲ್ಲ. ಅಲ್ಲದೆ, ಬಾಲಕನ ತಾಯಿ ಶಾಲೆಗೆ ತೆರಳಿದಾಗ ಮುಖ್ಯ ಶಿಕ್ಷಕಿ ಕೆಟ್ಟ ರೀತಿಯಲ್ಲಿ ವರ್ತಿಸಿರುವುದಾಗಿ ಅವರು ಆರೋಪಿಸಿದ್ದಾರೆ.

ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದರೂ, ಅದು ಸ್ವೀಕರಿಸಿಲ್ಲ ಎಂದದು ತಿಳಿಸಿದ್ದಾರೆ.