State News

ನಟ ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿ.17ರಿಂದ ಸಾಕ್ಷ್ಯ ವಿಚಾರಣೆ ಆರಂಭಕ್ಕೆ ಕೋರ್ಟ್ ತೀರ್ಮಾನ

admincoorgdaily

Photo credit: TV09

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತಕ್ಕೆ ಕಾಲಿಟ್ಟಿದೆ. ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಹಲವು ಮಂದಿಗೆ ಆರೋಪ ನಿಗದಿ ಮಾಡಿರುವ ನ್ಯಾಯಾಲಯ, ಈಗ ಸಾಕ್ಷಿಗಳ ಹೇಳಿಕೆ ದಾಖಲಿಸಲು ದಿನಾಂಕ ನಿಗದಿ ಮಾಡಿದೆ. ಡಿ. 17ರಿಂದ ಸಾಕ್ಷ್ಯ ವಿಚಾರಣೆ ನಡೆಸಲು ಕೋರ್ಟ್ ಆದೇಶಿಸಿದೆ.

ಪವಿತ್ರಾ ಗೌಡ ಪರ ವಕೀಲ ಬಾಲನ್ ಅವರಿಗೆ ನ್ಯಾಯಾಲಯದಿಂದ ಅಧಿಕೃತ ಮಾಹಿತಿ ತಲುಪಿದೆ. ದರ್ಶನ್ ಸೇರಿ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯ ವಿಚಾರಣೆಗೆ ಹಾಜರಾದರು. ಸಹಾಯಕ ಎಸ್‌ಪಿಪಿ ಸಚಿನ್ ಅವರು ಪ್ರತ್ಯಕ್ಷ ಸಾಕ್ಷಿಗಳು, ಎಫ್ಎಸ್ಎಲ್ ತಜ್ಞರು, ತಾಂತ್ರಿಕ ಸಾಕ್ಷಿಗಳ ಪ್ರತ್ಯೇಕ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಸಾಕ್ಷಿಗಳಿಗೆ ಸಮನ್ಸ್ ನೀಡುವಂತೆ ಮನವಿ ಬಂದ ಹಿನ್ನೆಲೆಯಲ್ಲಿ, ಕೋರ್ಟ್ ಸಾಕ್ಷಿ ಸಂಖ್ಯೆ 7 ಮತ್ತು 8 ಸೇರಿದಂತೆ ರೇಣುಕಾಸ್ವಾಮಿ ಅವರ ತಂದೆ–ತಾಯಿಗೆ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ 260 ಕ್ಕೂ ಹೆಚ್ಚು ಸಾಕ್ಷಿಗಳು ಇದ್ದು, ಅವರ ಹೇಳಿಕೆಗಳ ದಾಖಲಾತಿ ಪೂರ್ಣಗೊಂಡ ಬಳಿಕ ತೀರ್ಪು ಹೊರ ಬೀಳಲಿದೆ.

ಜಾಮೀನು ರದ್ದಾದ ನಂತರ ದರ್ಶನ್ ಹಾಗೂ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ 110 ಕ್ಕೂ ಹೆಚ್ಚು ದಿನಗಳಿಂದ ಇದ್ದಾರೆ. ಇತ್ತೀಚೆಗೆ ಜೈಲಿನೊಳಗಿನ ಅಕ್ರಮಗಳನ್ನು ತಡೆಯಲು ಜಾರಿ ಮಾಡಿದ ಕಠಿಣ ನಿಯಮಗಳಿಂದಾಗಿ ದರ್ಶನ್ ಅವರಿಗೆ ಹೆಚ್ಚುವರಿ ನಿರ್ಬಂಧಗಳು ಎದುರಾಗಿವೆ ಎಂದು ತಿಳಿದು ಬಂದಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಿಂಸೆಗೆ ನೀಡಲಾಗಿತ್ತು. ಆ ಹಿಂಸೆಯಿಂದ ಯುವಕ ರೇಣುಕಾಸ್ವಾಮಿ ಮೃತಪಟ್ಟ ನಂತರ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಯಿತು.