ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ:ಮಕ್ಕಳಿಂದ ವೈವಿಧ್ಯಮಯ ಪ್ರದರ್ಶನ

ಕೂಡುಮಂಗಳೂರು ಸರ್ಕಾರಿ  ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ:ಮಕ್ಕಳಿಂದ ವೈವಿಧ್ಯಮಯ ಪ್ರದರ್ಶನ

ಕುಶಾಲನಗರ, ಜ.26 : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ( ಕೂಡ್ಲೂರು ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ದಿನದ ಅಂಗವಾಗಿ ವಿವಿಧ ಬಣ್ಣದ ಉಡುಪು ತೊಟ್ಟು ವೇಷಧಾರಿಗಳಾಗಿದ್ದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

 ಮಕ್ಕಳು ಪ್ರದರ್ಶಿಸಿದ ವೈವಿಧ್ಯಮಯ ಕಲಾ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ಬಣ್ಣದ ಸೀರೆಗಳನ್ನು ಬಳಸಿಕೊಂಡು ಆಕರ್ಷಕವಾಗಿ ಪ್ರದರ್ಶಿಸಿದ ಸೀರೆ ನೃತ್ಯ ಗಮನ ಸೆಳೆಯಿತು. ಇದೇ ವೇಳೆ ಮಕ್ಕಳು ಪ್ರದರ್ಶಿಸಿದ ಯೋಗಾಭ್ಯಾಸ ಪ್ರದರ್ಶನ ಹಾಗೂ ಕೋಲಾಟ‌ ಮತ್ತು ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.

 ಸಂವಿಧಾನ ರಚನೆ ಮತ್ತು ಗಣತಂತ್ರ ವ್ಯವಸ್ಥೆ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಸ್ವಾತಂತ್ರ್ಯದ ನಂತರ ಸಂವಿಧಾನ ರಚನಾ ಸಭೆಯ ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಶ್ರಮ ಅಪಾರವಾದುದು. ಪ್ರಜಾಸತ್ತಾತ್ಮಕ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಸಂವಿಧಾನವು ಪ್ರಜಾತಂತ್ರ ವ್ಯವಸ್ಥೆಯ ಜೀವಾಳ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಎಂ.ಸಂತೋಷ್ ಮಾತನಾಡಿ, ಪ್ರತಿಯೊಬ್ಬರೂ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಂಡು ದೇಶದ ಸಮಗ್ರತೆ ಹಾಗೂ ಐಕ್ಯತೆಯನ್ನು ಎತ್ತಿ ಹಿಡಿಯಬೇಕು ಎಂದರು.

ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಶಿವಮ್ಮ (ಶಿವಮಣಿ) ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುನಂದ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಮವಸ್ತ್ರ ಧರಿಸಿ ಪ್ರದರ್ಶಿಸಿದ ಡಂಬಲ್ಸ್ ಮತ್ತು ಲೇಜಿಮ್ಸ್ ಪ್ರದರ್ಶನ ಹಾಗೂ ಯೋಗಾಭ್ಯಾಸ ಆಕರ್ಷಣೀಯವಾಗಿತ್ತು.

ಎಸ್ ಡಿ ಎಂ ಸಿ ಸಮಿತಿಯ ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಮಂಜುನಾಥ್, ಪೂಜಾ, ಶಾಹಿನ, ಸುಮಿತ್ರ, ಶಾರದ, ಸರಸ್ವತಿ, ಅರ್ಪಿತ, ಸುಮತಿ, ಶಾಲಾ ಶಿಕ್ಷಕರಾದ ಜಿ.ನಳಿನಿ, ಎ.ಮೇರಿ ಮಾರ್ಗರೇಟ್, ಕೆ.ಬಿ.ಗೀತಾರಾಣಿ, , ಎಚ್.ಆರ್.ಹೇಮಂತ್ ಕುಮಾರ್, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.