ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ |ನಿಮ್ಹಾನ್ಸ್ ವೈದ್ಯರು‌ ನೀಡಿದ ವರದಿಯೇನು ಗೊತ್ತಾ!

Nov 27, 2025 - 22:33
 0  1.7k
ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ |ನಿಮ್ಹಾನ್ಸ್ ವೈದ್ಯರು‌ ನೀಡಿದ ವರದಿಯೇನು ಗೊತ್ತಾ!
Photo credit:Prajavani (ಫೋಟೋ:ಪಲ್ಲವಿ& ಪ್ರಕಾಶ್)

ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಓಂ ಪ್ರಕಾಶ್ (68) ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರ ಪತ್ನಿ ಪಲ್ಲವಿ ಅವರು ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ನಿಮ್ಹಾನ್ಸ್ ವೈದ್ಯರ ತಂಡ ನೀಡಿರುವ ವರದಿ ಸ್ಪಷ್ಟಪಡಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಏಪ್ರಿಲ್ 20ರಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮನೆಯಲ್ಲಿ ಓಂ ಪ್ರಕಾಶ್ ಅವರನ್ನು ಹಲವಾರು ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪತ್ನಿ ಪಲ್ಲವಿ ಮೊದಲ ಆರೋಪಿ, ಪುತ್ರಿ ಕೃತಿಕಾ ಎರಡನೇ ಆರೋಪಿ ಎಂದು ಪ್ರಕರಣ ದಾಖಲಾಗಿತ್ತು. ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ನೀಡಿದ ದೂರಿನ ಮೇರೆಗೆ, ಏಪ್ರಿಲ್ 21ರಂದು ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದರು.

ಬಂಧನದ ಸಂದರ್ಭದಲ್ಲಿ ಪಲ್ಲವಿ ಮಾನಸಿಕ ಅಸ್ಥಿರತೆಯಂತೆ ವರ್ತಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಿ 15 ದಿನಗಳ ಕಾಲ ಆಪ್ತ ಸಮಾಲೋಚನೆ, ವೈಯಕ್ತಿಕ ವಿಚಾರಣೆ, ಸಿಸಿಟಿವಿ ಕಣ್ಗಾವಲು, ಐಕ್ಯೂ ಹಾಗೂ ಮನೋಮಟ್ಟ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ಈ ಎಲ್ಲಾ ಹಂತಗಳ ಪರಿಶೀಲನೆಯ ಬಳಿಕ, ಪಲ್ಲವಿ ಅವರಲ್ಲಿ ಯಾವುದೇ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ತಂಡ ಆಗಸ್ಟ್‌ನಲ್ಲಿ 1,150 ಪುಟಗಳ ದೋಷಾರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪತಿ ಹತ್ಯೆ ಬಳಿಕ ಪಲ್ಲವಿ ತಮ್ಮ ಸ್ನೇಹಿತರ ವಾಟ್ಸ್‌ಆಪ್ ಗುಂಪಿಗೆ ಕಳುಹಿಸಿದ್ದ ವಾಯ್ಸ್‌ ನೋಟ್‌ನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಪರಿಶೀಲನೆ ನಡೆಸಿದ ಪ್ರಯೋಗಾಲಯ, ವಾಯ್ಸ್ ನೋಟ್‌ನ ಧ್ವನಿ ಪಲ್ಲವಿಯದ್ದೇ ಎಂದು ದೃಢಪಡಿಸಿದೆ.

What's Your Reaction?

Like Like 0
Dislike Dislike 1
Love Love 2
Funny Funny 1
Angry Angry 0
Sad Sad 4
Wow Wow 1