ಲವ್ ಮ್ಯಾರೇಜ್ ವಿಚಾರಕ್ಕೆ ನ್ಯಾಯ ಪಂಚಾಯಿತಿಯಲ್ಲಿ ಗಲಾಟೆ; ನಾಲ್ವರಿಗೆ ಚಾಕು ಇರಿತ, ಆರೋಪಿಯ ಬಂಧನ

Oct 22, 2025 - 22:42
 0  1.2k
ಲವ್ ಮ್ಯಾರೇಜ್ ವಿಚಾರಕ್ಕೆ ನ್ಯಾಯ ಪಂಚಾಯಿತಿಯಲ್ಲಿ ಗಲಾಟೆ; ನಾಲ್ವರಿಗೆ ಚಾಕು ಇರಿತ, ಆರೋಪಿಯ ಬಂಧನ
Photo credit: Asaint news

ಯಾದಗಿರಿ, ಅ.22: ಲವ್ ಮ್ಯಾರೇಜ್ ವಿಚಾರಕ್ಕೆ ಸಂಬಂಧಿಸಿದ ನ್ಯಾಯ ಪಂಚಾಯಿತಿ ಗಲಾಟೆಗೆ ತಿರುಗಿ, ಚಾಕು ಇರಿದ ಘಟನೆ ಯಾದಗಿರಿ ನಗರದ ಹಳೆ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ.

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಾಗಾಲಾಪುರ ಗ್ರಾಮದ ಮಲ್ಲಪ್ಪ ಅಲಿಯಾಸ್ ನಿರ್ಮಲ್ ಎಂಬಾತನೇ ಈ ಘಟನೆಯ ಆರೋಪಿ. ಹೊನಗೇರಾ ಗ್ರಾಮದ ಪೀರಪ್ಪ, ಮಲ್ಲಪ್ಪ, ಮಲ್ಲೇಶ್ ಮತ್ತು ಮಲ್ಲಪ್ಪ ಎನ್ನುವ ನಾಲ್ವರಿಗೆ ಆರೋಪಿಯು ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪೀರಪ್ಪನ ಹೊಟ್ಟೆ ಮತ್ತು ಕೈಗೆ ಗಾಯವಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಯಾದಗಿರಿ ತಾಲೂಕಿನ ಮಲ್ಲಾರೆಡ್ಡಿ ಮತ್ತು ಶೋಭಾ ಎಂಬ ಯುವ ಜೋಡಿ ಬೆಂಗಳೂರಿನಲ್ಲಿ ಕೆಲಸ ಮಾಡುವ ವೇಳೆ ಪರಸ್ಪರ ಪ್ರೀತಿಸಿ, ಕುಟುಂಬಸ್ಥರ ಅನುಮತಿ ಇಲ್ಲದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ವಿಷಯ ತಿಳಿದ ಇಬ್ಬರ ಕುಟುಂಬಸ್ಥರು ಹಿರಿಯರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ನೆರವೇರಿಸಲು ಇಂದು ನ್ಯಾಯ ಪಂಚಾಯಿತಿ ನಡೆಸಿದ್ದರು.

ಸಭೆಯ ವೇಳೆ ಮಾತಿನ ಚಕಮಕಿ ಉಂಟಾಗಿ, ವಾಗ್ವಾದ ತೀವ್ರಗೊಂಡಿದ್ದು, ಈ ವೇಳೆ ಆಕ್ರೋಶಗೊಂಡ ಮಲ್ಲಪ್ಪ ಅಲಿಯಾಸ್ ನಿರ್ಮಲ್ ಚಾಕು ಹಿಡಿದು ನಾಲ್ವರಿಗೆ ಇರಿದಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಮಲ್ಲಾರೆಡ್ಡಿ–ಶೋಭಾ ವಿವಾಹಕ್ಕೆ ಮಲ್ಲಪ್ಪನೇ ಕಾರಣ ಎಂಬ ಅಸಮಾಧಾನ ಯುವತಿಯ ಕುಟುಂಬಸ್ಥರಲ್ಲಿದ್ದುದರಿಂದ, ಈ ಘಟನೆ ಉಂಟಾಗಿದೆ ಎನ್ನಲಾಗಿದೆ.

ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1