ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ 7.11 ಕೋಟಿ ದರೋಡೆ: ಸಂಚು ರೂಪಿಸಿದ್ದು ಪೋಲಿಸ್ ಪೇದೆ, ಸಿಎಂಎಸ್ ಮಾಜಿ ಉದ್ಯೋಗಿ!

Nov 21, 2025 - 13:39
 0  2k
ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ 7.11 ಕೋಟಿ ದರೋಡೆ: ಸಂಚು ರೂಪಿಸಿದ್ದು ಪೋಲಿಸ್ ಪೇದೆ, ಸಿಎಂಎಸ್ ಮಾಜಿ ಉದ್ಯೋಗಿ!
Photo credit: public tv

ಬೆಂಗಳೂರು: ಎಟಿಎಂಗಳಿಗೆ ತುಂಬಬೇಕಿದ್ದ ರೂ. 7.11 ಕೋಟಿ ಹಣದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಪೇದೆ ಮತ್ತು ಸಿಎಂಎಸ್ ಕಂಪನಿಯ ಮಾಜಿ ಉದ್ಯೋಗಿಯೇ ಸೂತ್ರಧಾರರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

 ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಹಾಗೂ ಸಿಎಂಎಸ್‌ನ ಮಾಜಿ ಸಿಬ್ಬಂದಿ ಝೇವಿಯರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಹೊಯ್ಸಳ ಗಸ್ತು ಕರ್ತವ್ಯದಲ್ಲಿದ್ದ ಅಣ್ಣಪ್ಪ, ಕರ್ತವ್ಯದ ಮಧ್ಯೆ ಝೇವಿಯರ್ ಜೊತೆ ಸಮಯ ಕಳೆಯುತ್ತಿದ್ದ. ಈ ವೇಳೆ ಎಟಿಎಂಗಳಿಗೆ ನಗದು ವರ್ಗಾವಣೆ ಮಾಡುವ ವಿಧಾನವನ್ನು ತಿಳಿದಿದ್ದ ಝೇವಿಯರ್, ಅದರ ಸಂಪೂರ್ಣ ಪ್ರಕ್ರಿಯೆಯನ್ನು ಅಣ್ಣಪ್ಪನಿಗೆ ವಿವರಿಸಿದ್ದ. ಈ ಮಾಹಿತಿಯನ್ನೇ ಆಧಾರ ಮಾಡಿಕೊಂಡು ಇಬ್ಬರೂ ದರೋಡೆಯಾಗುವಂತೆ ಸಂಚು ರೂಪಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಇವರ ಯೋಜನೆ ಪೂರ್ಣವಾಗಿ ‘ರಿಮೋಟ್ ಕಂಟ್ರೋಲ್' ರೀತಿಯದ್ದಾಗಿದ್ದು, ದರೋಡೆ ಸ್ಥಳಕ್ಕೆ ಹೋಗದೆ ದೂರದಿಂದಲೇ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಣವನ್ನು ಹೇಗೆ ಲಪಟಾಯಿಸಬೇಕು, ಹೇಗೆ ಪರಾರಿಯಾಗಬೇಕು ಎಂಬ ಕ್ರಮವನ್ನೂ ನಿಖರವಾಗಿ ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಇಬ್ಬರನ್ನೂ ಈಗಾಗಲೇ ಬಂಧಿಸಿದ್ದು, ದರೋಡೆಗೆ ಸಂಬಂಧಿಸಿದಂತೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.

What's Your Reaction?

Like Like 2
Dislike Dislike 0
Love Love 1
Funny Funny 3
Angry Angry 0
Sad Sad 1
Wow Wow 3