ಭಿಕ್ಷುಕನ ವೇಷದಲ್ಲಿ ಮನೆಗಳ ದರೋಡೆ: ಪೊಲೀಸರ ಬಲೆಗೆ ಬಿದ್ದ ಕುಖ್ಯಾತ ಮನೆಗಳ್ಳ

ಭಿಕ್ಷುಕನ ವೇಷದಲ್ಲಿ ಮನೆಗಳ ದರೋಡೆ:  ಪೊಲೀಸರ ಬಲೆಗೆ ಬಿದ್ದ ಕುಖ್ಯಾತ ಮನೆಗಳ್ಳ
Photo credit: TV09 (ಫೋಟೋ: ಬಂಧಿತ ಆರೋಪಿ)

ರಾಯಚೂರು, ನ. 21: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮನೆಗಳ ಬೀಗ ಒಡೆದು ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದ ಮೋಸ್ಟ್‌ ವಾಂಟೆಡ್‌ ಮನೆಗಳ್ಳನನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಭಿಕ್ಷುಕನ ಸೋಗಿನಲ್ಲಿ ಮನೆಗಳ ಸುತ್ತ ಓಡಾಡಿ, ಬೀಗ ಹಾಕಿರುವ ಮನೆಯನ್ನೇ ಗುರಿಯಾಗಿಸಿ ಈತ ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ.

ಬಂಧಿತ ರಾಮಕೃಷ್ಣ ಅಲಿಯಾಸ್ ‘ಗುಜ್ಜಲು’ ರಾಮಕೃಷ್ಣ ಆಂಧ್ರಪ್ರದೇಶದ ಧರ್ಮಾವರಂ ಮೂಲದವನು. ರಾಯಚೂರು, ಗೌರಿಬಿದನೂರು, ಹಿರಿಯೂರು, ಹಾವೇರಿ, ಗಂಗಾವತಿ ಮತ್ತು ಶಿರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದಾನೆ. ಮೊಬೈಲ್ ಬಳಸದೆ, ರೈಲು ಮೂಲಕ ನಗರಕ್ಕೆ ಬಂದು, ಭಿಕ್ಷುಕನಂತೆ ಏರಿಯಾ ವೀಕ್ಷಣೆ ಮಾಡಿ, ರಾತ್ರಿ ವೇಳೆ ಕನ್ನ ಹಾಕುತ್ತಿದ್ದನೆಂಬುದು ತನಿಖೆಯಿಂದ ಬಹಿರಂಗವಾಗಿದೆ.

ಮನೆಗಳ ಬೀಗ ಎಷ್ಟೇ ಬಿಗಿಯಾಗಿದ್ದರೂ ನಿಮಿಷಗಳಲ್ಲಿ ತೆರೆದು ಒಳನುಗ್ಗುವ ಚಾತುರ್ಯ ಹೊಂದಿದ್ದ ಈತನಿಂದ 36 ಲಕ್ಷ ಮೌಲ್ಯದ 315 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಖಾಸಗಿ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಹಣ ಪಡೆದು, ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ ಮಾದರಿ ಪೊಲೀಸರ ಗಮನಕ್ಕೆ ಬಂದಿದೆ. ರಾಯಚೂರು ನಗರ ಎಲ್ಐಸಿ ಅಧಿಕಾರಿಯ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ಈತನ ಕೈವಾಡ ಪತ್ತೆಯಾಗಿದೆ.

ಪ್ರಕರಣದ ವೇಳೆ ಸಿಕ್ಕಿದ್ದ ಬೆರಳಚ್ಚು ಆಧಾರದ ಮೇಲೆ ಸುಮಾರು 20 ದಿನಗಳ ಶೋಧ ಕಾರ್ಯಾಚರಣೆ ನಡೆಸಿ, ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಕಸ್ಟಡಿಗೆ ಪಡೆಯಲಾಗಿದೆ. ರಾಮಕೃಷ್ಣ ಮನೆಗಳ್ಳತನ ಮಾಡುತ್ತಿದ್ದ ವಿಚಾರ ತಿಳಿದಿದ್ದ ಬೇರೆ ಕಳ್ಳರು, ಈತನ ಮನೆಗೂ ನುಗ್ಗಿ ಚಿನ್ನ ಕದ್ದಿದ್ದಾರೆ ಎನ್ನುವ ಸ್ವಾರಸ್ಯಕರ ಮಾಹಿತಿ ಹೊರಬಂದಿದೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಇನ್ನೂ ಎಲ್ಲೆಲ್ಲಿ ಕಳ್ಳತನ ನಡೆಸಿದ್ದಾನೆ ಎಂಬುದು ಪತ್ತೆಹಚ್ಚುವ ಕಾರ್ಯ ಮುಂದುವರೆಸಿದ್ದಾರೆ.