ಕೆಎಸ್‌ಆರ್‌ಟಿಸಿ ಬಸ್‌ ನಲ್ಲಿ 55 ಲಕ್ಷ ರೂ. ನಗದು ಕಳ್ಳತನ : ಸೈಟ್ ಮಾರಾಟ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಹಣ!

Dec 19, 2025 - 22:51
Dec 20, 2025 - 12:36
 0  1.5k
ಕೆಎಸ್‌ಆರ್‌ಟಿಸಿ ಬಸ್‌ ನಲ್ಲಿ 55 ಲಕ್ಷ ರೂ. ನಗದು ಕಳ್ಳತನ : ಸೈಟ್ ಮಾರಾಟ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಹಣ!

ಚಿಕ್ಕಬಳ್ಳಾಪುರ, ಡಿ. 19: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ₹55 ಲಕ್ಷ ನಗದು ಕಳ್ಳತನವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅರೂರು ಸಮೀಪ ನಡೆದಿದೆ. ಪ್ರಯಾಣಿಕರ ಊಟ ವಿರಾಮದ ವೇಳೆ ಬಸ್‌ನೊಳಗೆ ನುಗ್ಗಿದ ಕಳ್ಳರು ಹಣದ ಬ್ಯಾಗ್‌ ಕದ್ದು ಪರಾರಿಯಾಗಿದ್ದಾರೆ.

ಬೆಂಗಳೂರಿನಿಂದ ಹೈದರಾಬಾದ್‌ ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ನಿನ್ನೆ ರಾತ್ರಿ ಅರೂರು ಬಳಿ ನಿಲ್ಲಿಸಲಾಗಿತ್ತು. ಈ ಸಂದರ್ಭ ಸೀಟ್‌ನಲ್ಲಿ ಇಡಲಾಗಿದ್ದ ನಗದು ತುಂಬಿದ ಬ್ಯಾಗ್‌ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ. ವೆಂಕಟೇಶ್ವರ ರಾವ್ ಅವರಿಗೆ ಸೇರಿದ್ದು, ಅವರು ಬೆಂಗಳೂರಿನಲ್ಲಿ ಮಾರಾಟ ಮಾಡಿದ ಮನೆಗೆ ಸಂಬಂಧಿಸಿದ ಹಣವನ್ನು ನಗದಾಗಿ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಟಾಟಾ ಇಂಡಿಕಾ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಬಸ್‌ ನೊಳಗೆ ಪ್ರವೇಶಿಸಿ ಸೀಟ್ ನಂ.4ರಲ್ಲಿ ಇಟ್ಟಿದ್ದ ಬ್ಯಾಗ್‌ನ್ನು ತೆಗೆದುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾನೆ. ಆರೋಪಿಯು ನಕಲಿ ನಂಬರ್ ಪ್ಲೇಟ್ ಹೊಂದಿದ ಕಾರನ್ನು ಬಳಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ತಾಂತ್ರಿಕ ಸುಳಿವುಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ವರದಿಯಾದ ಪ್ರಮುಖ ನಗದು ಕಳ್ಳತನ ಪ್ರಕರಣಗಳಲ್ಲಿ ಇದೂ ಒಂದಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 1
Wow Wow 0