ನಾಳೆಯಿಂದ ರಾಜ್ಯದಲ್ಲಿ SIR ಆರಂಭ:ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
*ಬೆಂಗಳೂರು, ಜೂನ್ 29*: ರಾಜ್ಯದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ -SIR ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ 5,54,32,314 ಮತದಾರರಿದ್ದು, ಎಲ್ಲರೂ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈಗಾಗಲೇ ಶೇ.91.61ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, 46,52,504 ಮತದಾರರು ಮ್ಯಾಪಿಂಗ್‌ನಿಂದ ಹೊರಗುಳಿದಿದ್ದಾರೆ ಎಂದರು.
ಪ್ರಮುಖ ದಿನಾಂಕಗಳು:
1. *ಜೂನ್ 30-ಜುಲೈ 29*: ಬಿಎಲ್‌ಒಗಳಿಂದ ಮನೆ-ಮನೆ ಭೇಟಿ, ಗಣತಿ ನಮೂನೆ ವಿತರಣೆ
2. *ಆಗಸ್ಟ್ 5*: ಕರಡು ಮತದಾರರ ಪಟ್ಟಿ ಬಿಡುಗಡೆ
3. *ಆಗಸ್ಟ್ 5-ಸೆಪ್ಟೆಂಬರ್ 4*: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
4. *ಅಕ್ಟೋಬರ್ 7*: ಅಂತಿಮ ಮತದಾರರ ಪಟ್ಟಿ ಪ್ರಕಟ
*ಸಿಬ್ಬಂದಿ ನಿಯೋಜನೆ:* ರಾಜ್ಯದಾದ್ಯಂತ 59,050 ಬಿಎಲ್‌ಒಗಳು, 1,15,112 ಬಿಎಲ್‌ಎಗಳು, 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ನೋಂದಣಾಧಿಕಾರಿಗಳು, 336 ಸಹಾಯಕ ನೋಂದಣಾಧಿಕಾರಿಗಳು, 7,556 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.
*ಗಣತಿ ನಮೂನೆ ಪ್ರಕ್ರಿಯೆ:* ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಡಿಜಿಟಲೀಕರಣಕ್ಕೆ ಕಳುಹಿಸಲಿದ್ದಾರೆ. ನಮೂನೆ ನೀಡಿದ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗುವುದು. ಭರ್ತಿ ಮಾಡಿದ ನಮೂನೆ ಸಂಗ್ರಹಕ್ಕೆ ಕನಿಷ್ಠ ಮೂರು ಬಾರಿ ಬಿಎಲ್‌ಒಗಳು ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ 1.88 ಕೋಟಿ ಮನೆಗಳಿವೆ.
"ಎನ್ಯೂಮರೇಷನ್ ಫಾರ್ಮ್‌ಗೆ ಕುಟುಂಬದ ಯಾರು ಬೇಕಾದರೂ ಸಹಿ ಮಾಡಬಹುದು. ಮತದಾರ ಹೊರಗಿದ್ದರೆ ಗಂಡನ ಪರವಾಗಿ ಹೆಂಡತಿ, ಸಹೋದರಿಯ ಪರವಾಗಿ ಸಹೋದರ ಸಹಿ ಹಾಕಬಹುದು. ಬಿಎಲ್‌ಒಗಳಿಗೆ ಯಾವುದೇ ದಾಖಲೆ ನೀಡುವಂತಿಲ್ಲ" ಎಂದು ಅನ್ಬುಕುಮಾರ್ ಸ್ಪಷ್ಟಪಡಿಸಿದರು.
ಪ್ರತಿ ಪಂಚಾಯಿತಿಯಲ್ಲಿ ವೋಟರ್ ಫೆಸಿಲಿಟಿ ಸೆಂಟರ್, ತಾಲ್ಲೂಕು ಮಟ್ಟದಲ್ಲಿ ಬಿಎಲ್‌ಒ ಸೆಂಟರ್ ತೆರೆಯಲಾಗಿದೆ. ನೆಟ್‌ವರ್ಕ್ ಸಮಸ್ಯೆ ಇರುವ ಕಡೆ ಬಿಎಲ್‌ಒಗಳಿಗೆ ವೈ-ಫೈ ಸೌಲಭ್ಯ ನೀಡಲಾಗಿದೆ. ಬಿಎಲ್‌ಒ, ಬಿಎಲ್‌ಎ ಸಂಪರ್ಕ ಸಂಖ್ಯೆ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.

