State News

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಆದೇಶ: 33 ವರ್ಷ ಹಳೆಯ ಪ್ರಕರಣದಲ್ಲಿ ರೈತನಿಗೆ ಕೊನೆಗೂ ನ್ಯಾಯ!

admincoorgdaily

Photo credit: TV09 (ಫೋಟೋ:ನಂದ್ಯಪ್ಪ &ಡಿಸಿ ಕಛೇರಿ)

ಶಿವಮೊಗ್ಗ: ವಸತಿ ಯೋಜನೆಗಾಗಿ ವಶಪಡಿಸಿಕೊಂಡ ರೈತನ ಭೂಮಿಗೆ ಸರಿಯಾದ ಪರಿಹಾರ ನೀಡದೆ ಜಿಲ್ಲಾಡಳಿತ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಡಿಸಿ ಕಾರನ್ನು ಜಪ್ತಿ ಮಾಡಲು ಆದೇಶಿಸಿದ ಘಟನೆ ಗುರುವಾರ ನಡೆದಿದೆ. ಕೋರ್ಟ್ ಅಮೀನರೊಂದಿಗೆ ಆದೇಶವನ್ನು ಜಾರಿಗೆ ತರಲು ಬಂದಿದ್ದ ರೈತನು, ಜಿಲ್ಲಾಧಿಕಾರಿ ನೀಡಿದ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ಹಿಂದಿರುಗಿದ್ದಾರೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ನಂದಾಯಪ್ಪ ಎಂಬ ರೈತಗೆ ಸೇರಿದ 1 ಎಕರೆ 2 ಗುಂಟೆ ಭೂಮಿಯನ್ನು 1992ರಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿ ವಶಕ್ಕೆ ಪಡೆದುಕೊಂಡಿತ್ತು. ₹22.60 ಲಕ್ಷ ಪರಿಹಾರ ನೀಡುವುದಾಗಿ ಮಾತುಕತೆ ನಡೆದಿದ್ದರೂ, ಪಂಚಾಯಿತಿಯಿಂದ ರೈತನಿಗೆ ಕೇವಲ ₹9 ಲಕ್ಷ ಮಾತ್ರ ನೀಡಲಾಗಿತ್ತು.

ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಸರ್ಕಾರಿ ಕಚೇರಿಗಳ ಸುತ್ತಾಡಿದ ರೈತ ಕೊನೆಗೆ ನ್ಯಾಯಾಲಯದ ಮೊರೆ ಹೋದರು. ಪ್ರಕರಣ ಪರಿಶೀಲಿಸಿದ ಜಿಲ್ಲಾ ನ್ಯಾಯಾಲಯವು, ರೈತನಿಗೆ ₹95,88,283 ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಜೊತೆಗೆ ಹಣ ಪಾವತಿಯಲ್ಲಿ ವಿಳಂಬವಾದರೆ, ಜಿಲ್ಲಾಧಿಕಾರಿಗಳ ಕಚೇರಿಯ ಪೀಠೋಪಕರಣಗಳು ಹಾಗೂ ಡಿಸಿ ಕಾರನ್ನು ಜಪ್ತಿ ಮಾಡಲು ಸೂಚಿಸಿದೆ.

ಕೋರ್ಟ್ ಆದೇಶದ ಪ್ರತಿ ಹಾಗೂ ಅಮೀನರನ್ನು ಕರೆದುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದ ನಂದಾಯಪ್ಪ, ವರ್ಷಗಳಿಂದ ಎದುರಿಸುತ್ತಿರುವ ಅನ್ಯಾಯವನ್ನು ಮಾಧ್ಯಮಕ್ಕೆ ವಿವರಿಸಿದರು.

“22 ಲಕ್ಷ ಕೊಡುತ್ತೇವೆ ಎಂದು ಹೇಳಿ 9 ಲಕ್ಷ ಮಾತ್ರ ನೀಡಿದರು. ಅಧಿಕಾರಿಗಳ ಬಾಗಿಲಲ್ಲಿ ವರ್ಷಗಳ ಕಾಲ ಅಲೆದಾಡಿದರೂ ನ್ಯಾಯ ಸಿಗಲಿಲ್ಲ. ಕೋರ್ಟ್‌ಗೆ ಹೋಗಿ, ಅದರಲ್ಲೂ ಖರ್ಚಾಗಿದ್ದು ನನ್ನ ಮತ್ತೊಂದು ಜಮೀನಿನ ₹25 ಲಕ್ಷ ಮೌಲ್ಯದ ಸಂಪತ್ತು ಮಾರಬೇಕಾಯಿತು,” ಎಂದು ಅವರು ಕಳವಳ ವ್ಯಕ್ತಪಡಿಸಿದರು.

“ಇಂದು ಕೋರ್ಟ್ ಆದೇಶದ ಮೇರೆಗೆ ಬಂದಿದ್ದೇನೆ. ನಮಗೆ ಪರಿಹಾರ ಕೊಡಿ, ನ್ಯಾಯ ನೀಡಿ,” ಎಂದು ವಿನಂತಿಸಿದರು.

 ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ, “ಕೋರ್ಟ್ ಆದೇಶವು ಯಾವ ಇಲಾಖೆಗೆ ಸಂಬಂಧಿಸಿದೆ ಎಂಬುದು ನನಗೆ ಸ್ಪಷ್ಟವಾಗಿಲ್ಲ. ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ನ್ಯಾಯ ಒದಗಿಸುವ ಕ್ರಮ ಕೈಗೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ಈ ಭರವಸೆಯನ್ನು ವಿಶ್ವಾಸದಿಂದ ತೆಗೆದುಕೊಂಡ ರೈತ ತಾತ್ಕಾಲಿಕವಾಗಿ ಜಪ್ತಿ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ.