ಯೋಗಾಸನದಲ್ಲಿ ಸಿಂಚನ ವಿಶ್ವ ದಾಖಲೆ: ವಿದ್ಯಾರ್ಥಿಯ ಸಾಧನೆ ಎಲ್ಲರಿಗೂ ಮಾದರಿ: ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ:ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು ಮದೆನಾಡು ಗ್ರಾಮದ, ಬಿಜಿಎಸ್ ಪಬ್ಲಿಕ್ ಶಾಲೆಗೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.
ಬಿಜಿಎಸ್ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿನಿ ಸಿಂಚನ ರವರು ಯೋಗಾಸನದಲ್ಲಿ ವಿಶ್ವ ದಾಖಲೆಯ ಸಾಧನೆ ಮಾಡಿರುವುದನ್ನು ಗೌರವಿಸಲು ಇಂದು ಬಿಜಿಎಸ್ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇದ್ದ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾನ್ಯ ಶಾಸಕರು ಭಾಗವಹಿಸಿದರು.
ಯೋಗಾಸನ ಸ್ಪರ್ಧೆಯಲ್ಲಿ, ಕುಮಾರಿ ಸಿಂಚನ ರವರು 3 ವಿಭಾಗಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ಸ್ವಾಮೀಜಿಯವರ ಆಶೀರ್ವಾದ ಪಡೆದು, ಕುಮಾರಿ ಸಿಂಚನ ರವರನ್ನು ಸನ್ಮಾನಿಸಿ ಮಾತನಾಡಿದ ಶಾಸಕರು, ಗ್ರಾಮೀಣ ಪ್ರದೇಶದ ಈ ವಿದ್ಯಾರ್ಥಿಯ ಸಾಧನೆ ಇಂದು ದೇಶಕ್ಕೆ ಮಾದರಿಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಸೌಲಭ್ಯಗಳ ಕೊರತೆಗಳ ನಡುವೆಯೂ ಎಲ್ಲವನ್ನು ಮೀರಿ ಇಂತಹ ಅದ್ಭುತ ಸಾಧನೆಯನ್ನು ಮಾಡಿರುವುದು ನಾಡಿಗೆ ಹೆಮ್ಮೆ ತರುವಂತಹ ವಿಷಯ. ಈ ವಿದ್ಯಾರ್ಥಿನಿಯು ತನ್ನ ಜೀವಮಾನದಲ್ಲಿ ಮತ್ತಷ್ಟು ಸಾಧನೆ ಮಾಡಲು ನಾವೆಲ್ಲರೂ ಪ್ರಯತ್ನಿಸಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಈ ವಿದ್ಯಾರ್ಥಿನಿಯ ಸಾಧನೆಯನ್ನು ಸರ್ಕಾರ ಮಟ್ಟದ ಗಮನಕ್ಕೆ ತಂದು ಇವಳ ಭವಿಷ್ಯ ರೂಪಿಸಲು ಸರ್ಕಾರದ ವತಿಯಿಂದ ಸಹಾಯ ವದಗುವಂತೆ ತಾನು ನೋಡಿಕೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು.
ವಿದ್ಯಾರ್ಥಿನಿಯ ಸಾಧನೆಯನ್ನು ಎಲ್ಲರೂ ಮಾದರಿಯಾಗಿ ತೆಗೆದುಕೊಂಡು ವಿಶೇಷವಾಗಿ ಗ್ರಾಮೀಣ ಭಾಗದ ಜನತೆ ಇದರಿಂದ ಪ್ರೋತ್ಸಾಹಿತರಾಗಬೇಕು ಎಂದು ಕರೆ ನೀಡಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಾಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಡಿಕೇರಿ ಶಾಸಕರಾದ ಡಾ ಮಂಥರ್ ಗೌಡ, ಮಹೇಶ್ ಯೋಗ ಶಿಕ್ಷಕರರು, ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಹಾಗೂ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಬೇಕಲ್ ರಮಾನಾಥ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.