ವಿದೇಶದಲ್ಲಿ ಕುಳಿತು ಫೈನಾನ್ಸ್ ಸಂಸ್ಥೆಯ ಅಕೌಂಟ್ ಹ್ಯಾಕ್: ಎರಡೂವರೆ ಗಂಟೆಗಳಲ್ಲಿ 49 ಕೋಟಿ ರೂ. ದೋಚಿದ ಸೈಬರ್ ಗ್ಯಾಂಗ್!

Oct 27, 2025 - 20:00
 0  907
ವಿದೇಶದಲ್ಲಿ ಕುಳಿತು ಫೈನಾನ್ಸ್ ಸಂಸ್ಥೆಯ ಅಕೌಂಟ್ ಹ್ಯಾಕ್: ಎರಡೂವರೆ ಗಂಟೆಗಳಲ್ಲಿ 49 ಕೋಟಿ ರೂ. ದೋಚಿದ ಸೈಬರ್ ಗ್ಯಾಂಗ್!

ಬೆಂಗಳೂರು, ಅ. 27: ವಿದೇಶದಲ್ಲಿ ಕುಳಿತು ಬೆಂಗಳೂರಿನ ಖಾಸಗಿ ಫೈನಾನ್ಸ್ ಕಂಪೆನಿಯ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಕೋಟಿ ಕೋಟಿ ಹಣ ದೋಚಿದ ಅಂತರರಾಷ್ಟ್ರೀಯ ಸೈಬರ್ ಅಪರಾಧಿಗಳ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರನ್ನು ಸಿಸಿಬಿ ಸೈಬರ್ ಅಪರಾಧ ಘಟಕದ ಪೊಲೀಸರು ಬಂಧಿಸಿದ್ದಾರೆ. ಕೇವಲ ಎರಡು ಗಂಟೆ ಅರ್ಧದೊಳಗೆ 49 ಕೋಟಿ ರೂಪಾಯಿ ದೋಚಿಲಾಗಿದೆ.

ಮಾರತಹಳ್ಳಿಯಲ್ಲಿರುವ ವಿಸ್ಡಮ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಖಾತೆಗಳನ್ನು ಆಗಸ್ಟ್ 7ರಂದು ಹ್ಯಾಕ್ ಮಾಡಲಾಗಿತ್ತು. ಕಂಪೆನಿಯ ಮ್ಯಾನೇಜರ್ ಪ್ರಕಾಶ್ ಅವರು ಆಗಸ್ಟ್ 9ರಂದು ದೂರು ನೀಡಿದ ಹಿನ್ನೆಲೆಯಲ್ಲಿ, ಸಿಸಿಬಿ ಸೈಬರ್ ಕ್ರೈಮ್ ವಿಭಾಗವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತು.

ಪೊಲೀಸರ ತನಿಖೆಯಲ್ಲಿ ಖದೀಮರು ವಿದೇಶದಲ್ಲಿ ಕುಳಿತು ವಿಪಿಎನ್ ನೆಟ್ವರ್ಕ್ ಬಳಸಿ ಹ್ಯಾಕಿಂಗ್ ನಡೆಸಿದ್ದಾರೆ ಎಂಬುದು ಬಹಿರಂಗವಾಗಿದೆ. ಬೆಳಗಾವಿ ಮೂಲದ ಇಸ್ಮಾಯಿಲ್ ಅತ್ತರ್ ಹಾಗೂ ಪಟೇಲ್ ಬಂಧಿತರಾಗಿದ್ದು, ಇವರನ್ನು ಬೆಂಗಳೂರಿಗೆ ಕರೆತರಲಾಗಿದೆ.

►ಹ್ಯಾಕಿಂಗ್ ಹೇಗೆ ನಡೆದಿದೆ?

ವಿಸ್ಡಮ್ ಫೈನಾನ್ಸ್ ಕಂಪೆನಿ ಸಾರ್ವಜನಿಕರಿಗೆ ಸಾಲ ನೀಡಲು ‘ಮನಿವೀವ್’ ಎಂಬ ಮೊಬೈಲ್ ಆ್ಯಪ್ ಬಳಸುತ್ತಿತ್ತು. ಸೈಬರ್ ಅಪರಾಧಿಗಳು ಹಾಂಕಾಂಗ್ ಮತ್ತು ಫಿಲಿಫೈನ್ಸ್‌ನಲ್ಲಿ ಕುಳಿತು ಫ್ರಾನ್ಸ್‌ನ IP ಅಡ್ರೆಸ್ ಮೂಲಕ ಆ್ಯಪ್‌ನ API ಕೀ ಹ್ಯಾಕ್ ಮಾಡಿ, ಕಂಪೆನಿಯ ಎರಡು ಬ್ಯಾಂಕ್ ಖಾತೆಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದಿದ್ದಾರೆ.

ಆ ಬಳಿಕ ಕೇವಲ 2.5 ಗಂಟೆಗಳಲ್ಲಿ 1,782 ಟ್ರಾನ್ಸಾಕ್ಷನ್ ಮೂಲಕ 653 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ತನಿಖೆ ತಪ್ಪಿಸಲು ಆರೋಪಿಗಳು ಸಾಮಾನ್ಯ ನಾಗರಿಕರ ಕೆಲ ಖಾತೆಗಳಿಗೆ ಸಣ್ಣ ಮೊತ್ತದ ಹಣ ವರ್ಗಾಯಿಸಿ ಪೊಲೀಸರು ಗೊಂದಲಕ್ಕೊಳಗಾಗುವಂತೆ ಮಾಡಿದ್ದಾರೆ.

ಪಟೇಲ್‌ನ ಖಾತೆಗೆ ₹27.39 ಲಕ್ಷ ಜಮಾ ಮಾಡಲಾಗಿದೆ. ಹೈದರಾಬಾದ್‌ನ Echelon Science Tech Pvt. Ltd. ಖಾತೆಗೆ ₹5.5 ಕೋಟಿ ವರ್ಗಾವಣೆ ಮಾಡಿದ್ದಾರೆ. ಒಟ್ಟು 49 ಕೋಟಿ ರೂ. ಹಣ 653 ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಬಂಧಿತರಿಂದ ಲ್ಯಾಪ್‌ಟಾಪ್, ಪೆನ್‌ಡ್ರೈವ್ ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳು ವಶಪಡಿಸಿಕೊಂಡಿದ್ದು, ತಾಂತ್ರಿಕ ವಿಶ್ಲೇಷಣೆ ಮುಂದುವರಿದಿದೆ. ಇನ್ನೂ ಐದು ಮಂದಿ ಆರೋಪಿಗಳು ಪರಾರಿಯಾಗಿದ್ದು, ಇವರ ಪೈಕಿ ಮೂವರು ದುಬೈನಲ್ಲಿ ಹಾಗೂ ಇಬ್ಬರು ಹಾಂಕಾಂಗ್‌ನಲ್ಲಿ ಇದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0