ಯುವತಿಯ ಕೊಠಡಿಗೆ ಪೊಲೀಸರ ಸೋಗಿನಲ್ಲಿ ನುಗ್ಗಿ ಸುಲಿಗೆ: ಹನಿಟ್ರ್ಯಾಪ್ ಗ್ಯಾಂಗ್ ನ ಆರು ಮಂದಿಯ ಬಂಧನ

Nov 25, 2025 - 13:16
 0  1.3k
ಯುವತಿಯ ಕೊಠಡಿಗೆ ಪೊಲೀಸರ ಸೋಗಿನಲ್ಲಿ ನುಗ್ಗಿ ಸುಲಿಗೆ: ಹನಿಟ್ರ್ಯಾಪ್ ಗ್ಯಾಂಗ್ ನ ಆರು ಮಂದಿಯ ಬಂಧನ
Photo credit: TV09 (ಫೋಟೋ: ಬಂಧಿತ ಗ್ಯಾಂಗ್)

ಬೆಂಗಳೂರು: ಮಾರತ್‌ಹಳ್ಳಿಯಲ್ಲಿರುವ ಯುವತಿಯೊಬ್ಬಳ ಕೊಠಡಿಗೆ ಪೊಲೀಸರ ಸೋಗಿನಲ್ಲಿ ನುಗ್ಗಿ ಸುಲಿಗೆ ಮಾಡಿದ ಆರು ಮಂದಿ ಆರೋಪಿಗಳನ್ನು ಎಚ್‌ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಮೂಲದ ಮುಹಮ್ಮದ್ ನಜಾಶ್ (24), ಸರುಣ್ (38), ವಿಷ್ಣು ಕೆ.ಟಿ. (23), ದಿವಾಕರ್ (34), ಮಧುಕುಮಾರ್ (32) ಹಾಗೂ ಕಿರಣ್ (29) ಎಂದು ಗುರುತಿಸಲಾಗಿದೆ.

ನವೆಂಬರ್‌ 7ರ ರಾತ್ರಿ 2 ಗಂಟೆಯ ಸುಮಾರಿಗೆ, ಮಾರತ್‌ಹಳ್ಳಿಯ ಕೊಠಡಿಯೊಂದರಲ್ಲಿ ವಾಸವಿದ್ದ ಯುವತಿಯರ ಮನೆಬಾಗಿಲು ತಟ್ಟಿದ ಆರೋಪಿಗಳು, ‘ಪೊಲೀಸರು’ ಎಂದು ಬೆದರಿಕೆ ಹಾಕುತ್ತ ಒಳನುಗ್ಗಿದ್ದರು. ನಂತರ, ಅವರ ಬಳಿಯಿದ್ದ ಎರಡು ಮೊಬೈಲ್‌ಫೋನ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು. ಜೊತೆಗೆ, “₹5 ಲಕ್ಷ ನೀಡದಿದ್ದರೆ ಮತ್ತೆ ಬರುತ್ತೇವೆ” ಎಂದು ಬೆದರಿಕೆ ಹಾಕಿದ್ದರೆಂದು ಯುವತಿ ಪೊಲೀಸ್ ದೂರು ನೀಡಿದ್ದಾರೆ.

ದೂರುದಾರ ಯುವತಿಗೆ ಟೀ ಅಂಗಡಿಯೊಂದರಲ್ಲಿ ನಜಾಶ್ ಪರಿಚಯವಾಗಿತ್ತು. ನವೆಂಬರ್‌ 7ರಂದು ಆತನ ಹುಟ್ಟುಹಬ್ಬದ ಆಚರಣೆಗೆ ಯುವತಿ ತನ್ನ ಕೊಠಡಿಗೆ ಆಹ್ವಾನಿಸಿದ್ದಳು. ಅದೇ ವೇಳೆ ರಾತ್ರಿ ಆರೋಪಿಗಳು ಬಂದಿದ್ದು, ಸುಲಿಗೆ ನಡೆಸಿದ್ದಾರೆ.

ಬಂಧಿತರನ್ನು ವಿಚಾರಿಸಿದಾಗ, ಕೃತ್ಯಕ್ಕೆ ನಜಾಶ್‌ನೇ ಮಾಸ್ಟರ್ ಮೈಂಡ್ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ, ಸರುಣ್ ಈ ಹಿಂದೆ ಹನಿಟ್ರ್ಯಾಪ್ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಮಾಹಿತಿ ದೊರಕಿದೆ. 

ಆರು ಮಂದಿಯನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 2
Wow Wow 0