ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತರಣೆ: ಅ. 31ರವರೆಗೆ ಗಣತಿ ಕಾರ್ಯ ಮುಂದುವರಿಕೆ ಸಮೀಕ್ಷೆ ಕರ್ತವ್ಯದಿಂದ ಶಿಕ್ಷಕರ ಬಿಡುಗಡೆ

Oct 20, 2025 - 10:34
 0  220
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತರಣೆ: ಅ. 31ರವರೆಗೆ ಗಣತಿ ಕಾರ್ಯ ಮುಂದುವರಿಕೆ  ಸಮೀಕ್ಷೆ ಕರ್ತವ್ಯದಿಂದ ಶಿಕ್ಷಕರ ಬಿಡುಗಡೆ
Photo credit: Prajavani

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಾಚರಣೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸುವ ನಿರ್ಧಾರವನ್ನು ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ರವಿವಾರ ನಡೆದ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಮುಂದಿನ ಹಂತದಲ್ಲಿ ಸಮೀಕ್ಷಾ ಕಾರ್ಯಕ್ಕಾಗಿ ಶಿಕ್ಷಕರನ್ನು ನಿಯೋಜಿಸುವುದಿಲ್ಲ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಿಂದ 22ರವರೆಗೆ ಸಮೀಕ್ಷಾಧಿಕಾರಿಗಳಿಗೆ ರಜೆಯನ್ನು ನೀಡಲಾಗಿದೆ. ಅಕ್ಟೋಬರ್ 23ರಿಂದ ಕಾರ್ಯ ಪುನರಾರಂಭವಾಗಿ 31ರವರೆಗೆ ಸಂಪೂರ್ಣಗೊಳ್ಳಲಿದೆ,” ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಸಮೀಕ್ಷೆ ಶೇ. 95ರಷ್ಟು ಪೂರ್ಣತೆ ಹಂತಕ್ಕೆ ತಲುಪಿದ್ದು, ರಾಮನಗರದಲ್ಲಿ ಶೇ. 86%, ಧಾರವಾಡದಲ್ಲಿ ಶೇ. 88% ಹಾಗೂ ಬೀದರ್ ಜಿಲ್ಲೆಯಲ್ಲಿ ಶೇ. 79.46% ಕಾರ್ಯ ಪ್ರಗತಿಯಲ್ಲಿದೆ. ಬೆಂಗಳೂರಿನಲ್ಲಿ ಮಾತ್ರ ಸಮೀಕ್ಷೆಯು ಶೇ. 45ರಷ್ಟೇ ಮುನ್ನಡೆಯಾಗಿದ್ದು, ತಡವಾಗಿ ಪ್ರಾರಂಭವಾದ ಕಾರಣ ಕಾರ್ಯ ಹಿಂದಕ್ಕೆ ಸರಿದಿದೆ. “ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಶೇಕಡಾ 100ರಷ್ಟು ಸಂಪೂರ್ಣಗೊಂಡಿದೆ,” ಎಂದು ಸಚಿವ ತಂಗಡಗಿ ಹೇಳಿದರು.

ಬೆಂಗಳೂರು ನಗರದಲ್ಲಿ ಸಮೀಕ್ಷೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಶಾಸಕರಿಗೆ ವಹಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ಕುರಿತು ಶೀಘ್ರದಲ್ಲೇ ಸಿಎಂ ಕಚೇರಿಯಿಂದ ಅಧಿಕೃತ ಆದೇಶ ಬರಲಿದೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 1