ಸೋಮವಾರಪೇಟೆ | ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ; 6 ಜನರ ವಿರುದ್ಧ ಪ್ರಕರಣ

Dec 23, 2025 - 19:10
 0  1.7k
ಸೋಮವಾರಪೇಟೆ | ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ; 6 ಜನರ ವಿರುದ್ಧ ಪ್ರಕರಣ
ವಶಪಡಿಸಿಕೊಂಡಿರುವ ಮರದ ದಿಮ್ಮಿಗಳು

ಮಡಿಕೇರಿ, ಡಿ. 23: ಕೊಡಗು ಜಿಲ್ಲೆಯಲ್ಲಿ ಅರಣ್ಯ ರಕ್ಷಣೆಯ ಹೊಣೆ ಹೊತ್ತಿದ್ದ ಸಿಬ್ಬಂದಿಯೇ ಮರಗಳ್ಳತನಕ್ಕೆ ಕೈಜೋಡಿಸಿರುವುದು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

 ಸೋಮವಾರಪೇಟೆ ಸಮೀಪದ ಮೀಸಲು ಅರಣ್ಯದಲ್ಲಿ ಅಮೂಲ್ಯ ತೇಗದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಆರ್‌ಟಿ ಸಿಬ್ಬಂದಿ ಸೇರಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಸೋಮವಾರಪೇಟೆ ತಾಲೂಕಿನ ಕಾಜೂನು ಬಳಿ ಇರುವ ಮೀಸಲು ಅರಣ್ಯದಲ್ಲಿ ಗಸ್ತಿನ ವೇಳೆ ಏಳು ತೇಗದ ಮರಗಳನ್ನು ಕಡಿದು ಉರುಳಿಸಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ಆರೋಪಿಗಳನ್ನು ಹಿಡಿಯಲು ನಾಲ್ಕು ದಿನಗಳ ಕಾಲ ನಿಗಾವಹಿಸಿದ್ದ ಅರಣ್ಯ ಇಲಾಖೆ, ಡಿಸೆಂಬರ್ 12ರ ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಮರಗಳ್ಳರನ್ನು ಹಿಡಿಯಲು ಮುಂದಾಗಿತ್ತು. ಈ ವೇಳೆ ನಡೆದ ಘರ್ಷಣೆಯಲ್ಲಿ ಅರಣ್ಯಾಧಿಕಾರಿ ಚಂದ್ರಶೇಖರ್ ಗಾಳಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಡರ್ ಚಾಲಕ ಸಂತೋಷ್ ಬಂಧನಕ್ಕೊಳಗಾಗಿದ್ದು, ಇತರ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಎಡವಾರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 25 ತೇಗದ ಮರಗಳು ಕಳವಾಗಿರುವ ಶಂಕೆ ವ್ಯಕ್ತವಾಗಿದೆ. ಕಡಿದು ಹಾಕಿದ್ದ ಏಳು ತೇಗದ ಮರಗಳ ದಿಮ್ಮಿಗಳು ಹಾಗೂ ಪಿಕ್‌ಅಪ್ ವಾಹನವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಬಂಧಿತ ಸಂತೋಷ್‌ನ ವಿಚಾರಣೆ ವೇಳೆ, ಮರಗಳ್ಳರಿಗೆ ಮಾಹಿತಿ ನೀಡುತ್ತಿದ್ದ ಆರ್‌ಆರ್‌ಟಿ ಸಿಬ್ಬಂದಿ ವಿನೋದ್‌ನ ಪಾತ್ರ ಬೆಳಕಿಗೆ ಬಂದಿದೆ. ಅರಣ್ಯದ ಸುತ್ತಮುತ್ತ ಬೈಕ್‌ನಲ್ಲಿ ಸಂಚರಿಸಿ ಕಳ್ಳತನಕ್ಕೆ ಸಹಕಾರ ನೀಡುತ್ತಿದ್ದನೆಂದು ಆರೋಪಿಸಲಾಗಿದ್ದು, ಪ್ರಕರಣ ಬಹಿರಂಗವಾದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿನೋದ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿ, ಉಳಿದ ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 3
Sad Sad 1
Wow Wow 0