ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಂಪೂರ್ಣ ಬೆಂಬಲ : ಬಿ.ಬಿ ಸತೀಶ್
ಸೋಮವಾರಪೇಟೆ: ಸಿ ಆ್ಯಂಡ್ ಡಿ ಕೃಷಿ ಭೂಮಿಯ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿ ವತಿಯಿಂದ ಆ. 12ರಂದು ಕರೆ ಕೊಟ್ಟಿರುವ ಸೋಮವಾರಪೇಟೆ ತಾಲ್ಲೂಕು ಬಂದ್‌ಗೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್ ಹೇಳಿದರು. ರೈತ ಹೋರಾಟ ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದ್ದ ಸದಸ್ಯರುಗಳೂ ಇದ್ದು, ಇದು ರೈತಪರವಾದ ಹೋರಾಟವಾಗಿದೆ. ಸಮಿತಿಯೂ ರಾಜಕೀಯ ರಹಿತವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕ ಡಾ.ಮಂತರ್‌ಗೌಡ ನೇತೃತ್ವದಲ್ಲಿ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಕಂದಾಯ ಸಚಿವರು, ಅರಣ್ಯ ಸಚಿವರು ಸೇರಿದಂತೆ ಸಂಬಂಧಪಟ್ಟ ಮೇಲಾಧಿಕಾರಿಗಳನ್ನು ಅನೇಕ ಬಾರಿ ಭೇಟಿ ಮಾಡಿ, ಸಿ ಆ್ಯಂಡ್ ಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಉನ್ನತಮಟ್ಟದ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಸಂಬಂಧಪಟ್ಟ ಸಚಿವರು ಭರವಸೆ ನೀಡಿದ್ದಾರೆ. ಇದರ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ರೈತರಿಗೆ ಅನ್ಯಾಯವಾಗುವುದಕ್ಕೆ ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಕುಮಾರ್ ಮಾತನಾಡಿ, ಕಳೆದ 20 ವರ್ಷಗಳಿಂದ ಸಿ ಆ್ಯಂಡ್ ಡಿ ಸಮಸ್ಯೆ ಬಗೆಹರಿಸಲು ನಾವೆಲ್ಲರೂ ನಿರಂತರ ಹೋರಾಟ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ, ರೈತರಿಗೆ ಒಂದಿಲ್ಲೊಂದು ಕಂಠಕಗಳು ಪ್ರಾರಂಭವಾಗಿದೆ. ಬಿಜೆಪಿ ನಿಜವಾದ ರೈತವಿರೋಧಿ ಸರ್ಕಾರವಾಗಿದೆ. ಸೂಕ್ಷ್ಮ ಪರಿಸರವಲಯ, ಕಸ್ತೂರಿರಂಗನ್ ವರದಿ, ಸಿ ಆ್ಯಂಡ್ ಡಿ ಸೇರಿದಂತೆ ಮೀಸಲು ಅರಣ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ಸುರ್ಪ್ರಿಂಕೋರ್ಟ್ ನಲ್ಲಿವೆ. ಕೇಂದ್ರ ಸರ್ಕಾರವೇ ರೈತರ ಪರವಾದ ವಿಷಯಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಕೇಂದ್ರ ಮೌನಕ್ಕೆ ಶರಣಾದರೆ ರೈತರು ಭೂಮಿ ಕಳೆದುಕೊಳ್ಳಬೇಕು. ಸಂಸದರೂ ಕೂಡ ರೈತಪರವಾಗಿ ಕೇಂದ್ರ ಮಟ್ಟದಲ್ಲಿ ಮಾತನಾಡಬೇಕು ಎಂದು ಹೇಳಿದರು. ವಿಧಾನಸಭಾ ಮುಂಗಾರು ಅಧಿವೇಶನದಲ್ಲಿ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯ ಬಗ್ಗೆ ಈ ಬಾರಿಯೂ ಚರ್ಚಿಸುವಂತೆ ಕೊಡಗಿನ ಇಬ್ಬರು ಶಾಸಕರುಗಳಿಗೆ ಮನವಿ ಮಾಡಕೊಳ್ಳಲಾಗಿದೆ. ರೈತ ಪರವಾಗಿ ಚರ್ಚಿಸಲಾಗುವುದು ಎಂದು ಶಾಸಕರುಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಪದಾಧಿಕಾರಿ ನಂದಕುಮಾರ್, ಪಕ್ಷದ ಮುಖಂಡರಾದ ಎಸ್.ಎಂ.ಚಂಗಪ್ಪ, ವಿ.ಎ.ಲಾರೆನ್ಸ್ ಇದ್ದರು.