ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀರಾಮನವಮಿ - ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು

Mar 27, 2026 - 19:01
 0  207
ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀರಾಮನವಮಿ - ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು

ಮಡಿಕೇರಿ : ಶ್ರೀ ವಿನಾಯಕ ಸೇವಾ ಟ್ರಸ್ಟ್‌ ಕತ್ತಲೆಕಾಡು-ಜೇನುಕೊಲ್ಲಿ ವತಿಯಿಂದ ಶ್ರೀರಾಮನವಮಿ, ದುರ್ಗಾಪೂಜೆ ಹಾಗೂ ಟ್ರಸ್ಟ್‌ನ ವಾರ್ಷಿಕ ಮಹಾಸಭೆ ಸಂಭ್ರಮದಿಂದ ಜರುಗಿತು.

 ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್‌ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ಪೂಜಾ ಕಾರ್ಯಗಳು ನೆರವೇರಿದವು. ಟ್ರಸ್ಟ್‌ನ ನೂತನ ಜಾಗದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಸಭಾಭವನಕ್ಕೆ ದೇವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ತಂದು ಇರಿಸಲಾಯಿತು. ನೂತನ ಭಜನಾ ಮಂದಿರ ನಿರ್ಮಾಣ ಸಂಬಂಧ ಟ್ರಸ್ಟ್‌ ವತಿಯಿಂದ ಸಾಮೂಹಿಕ ದುರ್ಗಾ ಹೋಮ ಏರ್ಪಡಿಸಲಾಗಿತ್ತು.

 ಬಳಿಕ ಶ್ರೀರಾಮಚಂದ್ರನ ಚಿತ್ರಪಟಕ್ಕೆ ಆರತಿ ಬೆಳಗಿ ಪ್ರಾರ್ಥಿಸಲಾಯಿತು. ದಿನದ ಪ್ರಯುಕ್ತ ಪುಟಾಣಿ ಮಕ್ಕಳು ಶ್ರೀರಾಮಚಂದ್ರ ಹಾಗೂ ಸೀತಾ ಮಾತೆಯ ವೇಷ ಧರಿಸಿ ಪಾಲ್ಗೊಂಡು ವಿಶೇಷ ಮೆರುಗು ನೀಡಿದರು. ಗಿರೀಶ್‌ ತಂತ್ರಿ ಮಾತನಾಡಿ, ನಮ್ಮ ಧರ್ಮದ ಪಾಲನೆ ಮತ್ತು ರಕ್ಷಣೆಯನ್ನು ನಾವೇ ಮಾಡಬೇಕು. ಧರ್ಮ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಾಗಿ ನಮ್ಮಲ್ಲಿ ಜಾಗೃತಿ ನಿರಂತರವಾಗಿರಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮವರೇ ನಮ್ಮ ಧರ್ಮವನ್ನು ಬೇರೆ ಬೇರೆ ರೀತಿಯಲ್ಲಿ ಅವಹೇಳನ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

 ರಾಮನವಮಿಯ ಪ್ರಯುಕ್ತ ಪಾನಕ, ಮಜ್ಜಿಗೆ ವಿತರಿಸಲಾಯಿತು. ಕತ್ತಲೆಕಾಡು, ಜೇನುಕೊಲ್ಲಿ, ಕ್ಲೋಸ್‌ಬರ್ನ್‌ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ವಿಶೇಷ ಸಂಭ್ರಮಕ್ಕೆ ಸಾಕ್ಷಿಯಾದರು. ಬಳಿಕ ಅನ್ನಪ್ರಸಾದ ವಿತರಿಸಲಾಯಿತು.

ವಾರ್ಷಿಕ ಮಹಾಸಭೆ : ಟ್ರಸ್ಟ್‌ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷ ಹೊನ್ನಪ್ಪ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಬ್ರಿಜೇಶ್‌ ರೈ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸುಜಾತಾ ಡಿ.ಎಂ., ನಾರಾಯಣ, ಕಿಶೋರ್‌ ರೈ ಕತ್ತಲೆಕಾಡು, ತೃಪ್ತಿ ಬಿ.ಎಸ್.‌, ತನುಶ್ರೀ ಬಿ.ಜೆ., ಚರಣ್‌ ಎಂ.ಆರ್.‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಮ, ಸೀತೆಯ ರೂಪದಲ್ಲಿ ಕಂಗೊಳಿಸಿದ ಪುಟಾಣಿಗಳಾದ ಅದೃಷ್ಟ, ಮನಸ್ಸು ಕಿಶೋರ್ ರೈ, ಅದ್ವಿಕ ರೈ, ಶ್ರೀನಿಧಿ, ಅಕ್ಷನ, ನಿಶ್ಮಿತಾ, ಚಾರ್ವಿನ್‌ ಎಂ. ರೈ ಅವರಿಗೆ ಸ್ಮರಣಿಗೆ ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.

 ಮುಖ್ಯ ಅತಿಥಿಯಾಗಿ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಕೆ.ಕೆ. ಮಹೇಶ್‌ ಕುಮಾರ್‌ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಮಕ್ಕಳು ಮತ್ತು ಹಿರಿಯರಿಗೆ ಧರ್ಮ, ಸಂಸ್ಕೃತಿಯ ಕುರಿತಾಗಿ ಅರಿವು ಮೂಡಿಸುವ ಕಾರ್ಯವನ್ನು ವಿನಾಯಕ ಸೇವಾ ಟ್ರಸ್ಟ್‌ ಜವಾಬ್ದಾರಿಯಿಂದ ಮಾಡಿಕೊಂಡು ಬರುತ್ತಿದೆ. ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಭಜನಾ ತಂಡ ಉತ್ತಮ ತಂಡವಾಗಿ ರೂಪುಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಟ್ರಸ್ಟ್‌ ವತಿಯಿಂದ ಉದ್ದೇಶಿಸಿರುವ ಭಜನಾ ಮಂದಿರ ನಿರ್ಮಾಣ ಸಂಬಂಧ ಎಲ್ಲರೂ ಕೈಜೋಡಿಸಬೇಕಿದೆ. ಗ್ರಾಮದಲ್ಲಿ ಉತ್ತಮ ಮಂದಿರ ನಿರ್ಮಾಣವಾದರೆ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ರಾಮಾಂಜನೇಯ ಭಜನಾ ಮಂಡಳಿಯಿಂದಲೂ ನೆರವಾಗುವ ವಿಶ್ವಾಸ ವ್ಯಕ್ತಪಡಿಸಿದರು.

 ಶಿಕ್ಷಕಿ ಸುಜಾತಾ ಮಾತನಾಡಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಟ್ರಸ್ಟ್‌ ಸದಾ ತೊಡಗಿಸಿಕೊಳ್ಳುತ್ತಿದೆ. ಗ್ರಾಮದ ಶಾಲೆಯ ಏಳಿಗೆ ನಿಟ್ಟಿನಲ್ಲೂ ಉತ್ತಮ ಸಹಕಾರವನ್ನು ನೀಡುತ್ತಿದೆ ಎಂದರು.

ಟ್ರಸ್ಟ್‌ನ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಜನಾರ್ದನ್‌, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸುರೇಶ್‌ ಕೆ.ಯು. ವೇದಿಕೆಯಲ್ಲಿದ್ದರು. ರುಕ್ಮಿಣಿ ಕೃಷ್ಣಪ್ಪ ಪ್ರಾರ್ಥಿಸಿದರು. ಚಂದ್ರಶೇಖರ್ ರೈ ಸ್ವಾಗತಿಸಿದರು. ಕಿಶೋರ್‌ ರೈ ಕತ್ತಲೆಕಾಡು ನಿರೂಪಿಸಿದರು. ವನಿತಾ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0