ಕಾಶಿಬುಗ್ಗ ದೇವಾಲಯದಲ್ಲಿ ಕಾಲ್ತುಳಿತ; 9 ಮಂದಿ ಮೃತ್ಯು, ಕೊಲೆ ಪ್ರಕರಣ ದಾಖಲು
admincoorgdaily
ಶ್ರೀಕಾಕುಳಂ (ಆಂಧ್ರಪ್ರದೇಶ): ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಕಾಲ್ತುಳಿತ ದುರಂತದಲ್ಲಿ ಕನಿಷ್ಠ ಒಂಭತ್ತು ಮಂದಿ ಭಕ್ತರು ಸಾವನ್ನಪ್ಪಿದ ಘಟನೆ ನಡೆದಿದೆ. ಹಲವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆಟ್ಟಿಲುಗಳ ಬಳಿ ಅಳವಡಿಸಲಾಗಿದ್ದ ಕಬ್ಬಿಣದ ಗ್ರಿಲ್ ಏಕಾಏಕಿ ಕುಸಿದಿದ್ದು, ಜನಸಂದಣಿಯ ನಡುವೆ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದೆ. ಸಾಕಷ್ಟು ಭಕ್ತರು ಒಂದೇ ವೇಳೆ ಮೆಟ್ಟಿಲುಗಳತ್ತ ಧಾವಿಸಿದಾಗ ಈ ಅವಘಡ ಸಂಭವಿಸಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಮಾಲೀಕ ಹರಿ ಮುಕುಂದ ಪಾಂಡ ವಿರುದ್ಧ ಕೊಲೆ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಶ್ರೀಕಾಕುಳಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಮಹೇಶ್ವರ ರೆಡ್ಡಿ ತಿಳಿಸಿದ್ದಾರೆ. ದೇವಾಲಯದಲ್ಲಿ ಭದ್ರತಾ ಕ್ರಮಗಳ ಕೊರತೆಯೇ ಈ ಅನಾಹುತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
Prime Minister Narendra Modi condoled the loss of lives due to the stampede in Venkateswara Swamy Temple in Srikakulam, Andhra Pradesh.
— The Hindu (@the_hindu) November 1, 2025
Union Minister J.P. Nadda expressed shock, and condolences to the members of the bereaved families.https://t.co/wYeuCMFkNZ pic.twitter.com/Italj0uUnQ
ದುರಂತ ಕುರಿತಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಹಾಗೂ ಪರಿಹಾರ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರವನ್ನು ಘೋಷಿಸಲಾಗಿದೆ.