7 ವರ್ಷದ ಬಾಲಕಿಯನ್ನೇ ಹತ್ಯೆಗೈದ ಮಲತಂದೆ

Oct 29, 2025 - 12:04
 0  729
7 ವರ್ಷದ ಬಾಲಕಿಯನ್ನೇ ಹತ್ಯೆಗೈದ ಮಲತಂದೆ

ಬೆಂಗಳೂರು, ಅ. 29: ಪತ್ನಿಯೊಂದಿಗಿನ ಖಾಸಗಿ ಕ್ಷಣಗಳಿಗೆ ಅಡ್ಡಿಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಏಳು ವರ್ಷದ ಬಾಲಕಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಅಮಾನುಷ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮಲತಂದೆಯನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ದರ್ಶನ್ ಎಂದು ಗುರುತಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅಕ್ಟೋಬರ್ 24ರಂದು ಕುಂಬಳಗೋಡು ಠಾಣೆ ವ್ಯಾಪ್ತಿಯ ಕನ್ನಿಕಾ ಬಡಾವಣೆಯ ಮನೆಯೊಂದರಲ್ಲಿ ಸಿರಿ (7) ಎಂಬ ಬಾಲಕಿಯನ್ನು ಹತ್ಯೆ ಮಾಡಲಾಗಿದೆ. ಮೃತಳ ತಾಯಿ ಶಿಲ್ಪಾ, ಮೊದಲ ಪತಿಯ ನಿಧನದ ಬಳಿಕ ದರ್ಶನ್‌ನೊಂದಿಗೆ ಮರುಮದುವೆಯಾಗಿದ್ದರು. ದರ್ಶನ್ ಆನೇಕಲ್‌ನ ರೀಟೈಲ್ ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶಿಲ್ಪಾ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

ಆರಂಭದಲ್ಲಿ ಸಿರಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ದರ್ಶನ್, ಬಳಿಕ ದಂಪತಿಯ ಖಾಸಗಿ ಜೀವನಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂಬ ಅಸಮಾಧಾನದಿಂದಾಗಿ ಬಾಲಕಿಗೆ ಹಿಂಸೆ ನೀಡುತ್ತಿದ್ದನು. ಆಗಾಗ ಹೊಡೆದ ಪರಿಣಾಮ ಸಿರಿ ಭಯಭೀತಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ದಿನ ಶಿಲ್ಪಾ ಕೆಲಸಕ್ಕೆ ತೆರಳಿದ್ದ ವೇಳೆ, ಶಾಲೆಯಿಂದ ಮನೆಗೆ ಬಂದ ಸಿರಿ ಪರಿಚಯಸ್ಥರ ಅಂಗಡಿಯ ಬಳಿ ನಿಂತಿದ್ದಳು. ಈ ವೇಳೆ ದರ್ಶನ್ ಬಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ, ಸಿರಿ “ಅಪ್ಪ ಹೊಡೆಯುತ್ತಾನೆ” ಎಂದು ಎಲ್ಲರ ಎದುರು ಹೇಳಿ ಮನೆಗೆ ಬರಲು ನಿರಾಕರಿಸಿದ್ದಳು. ಕೋಪಗೊಂಡ ದರ್ಶನ್ ಬಲವಂತವಾಗಿ ಆಕೆಯನ್ನು ಮನೆಗೆ ಕರೆದೊಯ್ದು, ಥಳಿಸಿ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಹತ್ಯೆಯ ನಂತರ ರಕ್ತದ ಕಲೆಗಳನ್ನು ತೊಳೆದು, ಪತ್ನಿ ಮನೆಗೆ ಬರುವವರೆಗೆ ಕಾಯುತ್ತಿದ್ದ ದರ್ಶನ್, ಶಿಲ್ಪಾ ಮನೆಗೆ ಬಂದ ಬಳಿಕ “ಮಗಳು ಮಾತನಾಡುತ್ತಿಲ್ಲ” ಎಂದು ಹೇಳಿದ್ದಾನೆ. ಶಿಲ್ಪಾ ಮಗಳ ಸ್ಥಿತಿ ನೋಡಿ ಕಿರುಚಿದಾಗ, ದರ್ಶನ್ ಆಕೆಯನ್ನು ಕೋಣೆಯೊಳಗೆ ಕೂಡಿಹಾಕಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಾಯಿ ಶಿಲ್ಪಾ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪತ್ತೆ ಹಚ್ಚಿದ ಬಳಿಕ ದರ್ಶನ್‌ ನನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 2
Sad Sad 2
Wow Wow 0