Kodagu

ಮೂಗಿಗೆ ತುಪ್ಪ ಸವರುವುದನ್ನು ಬಿಡಿ, ರಸ್ತೆಗಳ ಅಭಿವೃದ್ಧಿಗೆ ರೂ.1000 ಕೋಟಿ ಕೊಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ

admincoorgdaily

ಮೂಗಿಗೆ ತುಪ್ಪ ಸವರುವುದನ್ನು ಬಿಡಿ, ರಸ್ತೆಗಳ ಅಭಿವೃದ್ಧಿಗೆ ರೂ.1000 ಕೋಟಿ ಕೊಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ

ಮಡಿಕೇರಿ ಆ.31 : ಕಾವೇರಿ ನದಿ ನೀರಿನಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿರುವ ರಾಜ್ಯ ಸರಕಾರ ಕಾವೇರಿಯ ಜನ್ಮ ಸ್ಥಳ ಕೊಡಗಿನ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನವನ್ನು ನೀಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಬಾರಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಎಲ್ಲಾ ರಸ್ತೆಗಳನ್ನು ಪುನರ್ ಡಾಂಬರೀಕರಣ ಮತ್ತು ಕಾಂಕ್ರಿಟೀಕರಣ ಮಾಡುವ ಅನಿವಾರ್ಯತೆ ಇದೆ. ಆದ್ದರಿಂದ ಕೊಡಗಿನ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ರೂ.1 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಕೊಡಗಿನಲ್ಲಿ ಉತ್ತಮ ಮಳೆಯಾಗುವುದರಿಂದ ರಾಜ್ಯದ ಕೋಟ್ಯಾಂತರ ಜನ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನಡೆಯುತ್ತಿರುವ ಸಂಘರ್ಷ ಶಮನವಾಗಲು ಜಿಲ್ಲೆಯಲ್ಲಾಗಿರುವ ಮಳೆಯೇ ಕಾರಣವಾಗಿದೆ. ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಸರಕಾರ ಮಳೆಯಿಂದಾಗಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸುವ ಜಿಲ್ಲೆಗೆ ದೊಡ್ಡ ಮೊತ್ತದ ಅನುದಾನವನ್ನು ನೀಡದೆ ಮಲತಾಯಿ ಧೋರಣೆ ತೋರುವುದು ಸರಿಯಲ್ಲ.

ಕಾವೇರಿ ತುಲಾಸಂಕ್ರಮಣ ಜಾತ್ರೆಗೆ ಸರಕಾರ 2 ಕೋಟಿ ರೂ.ಗಳನ್ನು ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದು ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದ್ದು, ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳ ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನವನ್ನು ಬಿಡುಗಡೆ ಮಾಡಬೇಕು. ರಾಜ್ಯದ ಎಲ್ಲಾ ಪುಣ್ಯ ಕ್ಷೇತ್ರಗಳ ರಸ್ತೆಗಳು ಗುಣಮಟ್ಟದ ಕಾಮಗಾರಿಯೊಂದಿಗೆ ಉನ್ನತ ಮಟ್ಟದಲ್ಲಿವೆ. ಆದರೆ ದಕ್ಷಿಣ ಗಂಗೆ ಖ್ಯಾತಿಯ ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ರಸ್ತೆ ಶಾಸಕರುಗಳಿಗೇ ಪ್ರೀತಿ ಎನ್ನುವಂತ್ತಿದೆ. ಕ್ಷೇತ್ರಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ವಾರ್ಷಿಕ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರವಾಸೋದ್ಯಮದ ಮೂಲಕ ರಾಜ್ಯ ಸರಕಾರಕ್ಕೆ ಹೆಚ್ಚು ಆದಾಯ ಹರಿದು ಬರುತ್ತಿದೆ. ಆದರೆ ಪುಣ್ಯ ಕ್ಷೇತ್ರ ತಲಕಾವೇರಿಗೆ ಸರ್ವಋತು ರಸ್ತೆ ನಿರ್ಮಾಣಕ್ಕೆ ಸರಕಾರ ಆಸಕ್ತಿ ತೋರುತ್ತಿಲ್ಲ. ಅಲ್ಲದೆ ಈ ಬಗ್ಗೆ ಶಾಸಕರು ಕೂಡ ಕಾಳಜಿ ವಹಿಸುತ್ತಿಲ್ಲ. ಕಾಂಗ್ರೆಸ್ ಸರಕಾರ ಬಂದಾಗಿನಿಂದ ಜಿಲ್ಲೆಗೆ ವಿವಿಧ ಯೋಜನೆಗಳು ಘೋಷಣೆಯಾಯಿತೇ ಹೊರತು ಯಾವುದೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಜಿಲ್ಲೆಯ ಜನರಿಗೆ ಸೂರ್ಯ, ಚಂದ್ರರನ್ನು ತೋರಿಸಿ ಭ್ರಮೆಯನ್ನಷ್ಟೇ ಮೂಡಿಸಲಾಗುತ್ತಿದೆ ಎಂದು ಶಿವಕುಮಾರ್ ನಾಣಯ್ಯ ಆರೋಪಿಸಿದ್ದಾರೆ.

ಮಳೆ, ಚಳಿ, ಗಾಳಿಯೊಂದಿಗೆ ಜೀವನ ಸಾಗಿಸುತ್ತಿರುವ ಕೊಡಗಿನ ಜನ ತ್ಯಾಗಮಯಿಗಳಾಗಿದ್ದಾರೆ. ಕಾವೇರಿ ನದಿ ನೀರಿನ ಲಾಭವನ್ನು ರಾಜ್ಯ ಮತ್ತು ಹೊರ ರಾಜ್ಯದ ಮಂದಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಜಿಲ್ಲೆಯ ಜನ ಮಳೆಯಿಂದ ಹದಗೆಟ್ಟ ರಸ್ತೆಯಲ್ಲಿ ಸುಗಮ ಸಂಚಾರವಿಲ್ಲದೆ ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಗಳೆಲ್ಲವೂ ಗುಂಡಿಮಯವಾಗಿದ್ದು, ಪ್ರವಾಸಿಗರೆದುರು ಕೊಡಗು ತಲೆ ತಗ್ಗಿಸುವಂತ್ತಾಗಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಯಾವುದೇ ಬೃಹತ್ ಯೋಜನೆಗಳನ್ನು ನೀಡದ ಕಾಂಗ್ರೆಸ್ ಸರಕಾರ ಕನಿಷ್ಠ ರಸ್ತೆಗಳ ಅಭಿವೃದ್ಧಿಗಾದರೂ 1 ಸಾವಿರ ಕೋಟಿ ರೂ. ನೀಡಲಿ. ಜಿಲ್ಲೆಯ ಶಾಸಕರುಗಳು ಕೂಡ ಈ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಿ ಎಂದು ಒತ್ತಾಯಿಸಿದ್ದಾರೆ.