ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಬೆಂಗಳೂರಿನ ಡೆಂಟಲ್ ಕಾಲೇಜಿನ ಆರು ಉಪನ್ಯಾಸಕರು ವಜಾ

Jan 12, 2026 - 23:51
 0  1.5k
ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಬೆಂಗಳೂರಿನ ಡೆಂಟಲ್ ಕಾಲೇಜಿನ ಆರು ಉಪನ್ಯಾಸಕರು ವಜಾ
Photo credit: TV09(ಫೋಟೋ; ಯಶಸ್ವಿನಿ)

ಬೆಂಗಳೂರು, ಜ.12:ಆನೇಕಲ್ ಸಮೀಪದ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಗರದ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜು ಆಡಳಿತ ಮಂಡಳಿ ಆರು ಉಪನ್ಯಾಸಕರನ್ನು ಸೇವೆಯಿಂದ ವಜಾ ಮಾಡಿದೆ.

ಜನವರಿ 8ರಂದು ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾಲೇಜಿನ ಕೆಲ ಉಪನ್ಯಾಸಕರಿಂದ ನಡೆದ ನಿರಂತರ ಕಿರುಕುಳ ಹಾಗೂ ಅವಮಾನವೇ ಈ ದುರ್ಘಟನೆಗೆ ಕಾರಣವೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಾಂಶುಪಾಲರು ಸೇರಿದಂತೆ ಐವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ.

ಎಫ್‌ಐಆರ್ ದಾಖಲಾಗಿದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡು ಓಎಂಆರ್ ವಿಭಾಗದ ಡಾ. ಅನಿಮೋಲ್, ಡಾ. ಶಬಾನಾ, ಡಾ. ಫೈಕಾ, ಡಾ. ಸಿಂಧು, ಡಾ. ಸುಶ್ಮಿನಿ ಹಾಗೂ ಡಾ. ಅಲ್ಬಾ ಅವರನ್ನು ಸೇವೆಯಿಂದ ವಜಾ ಮಾಡಿದೆ.

ಸಹಪಾಠಿಗಳ ಎದುರೇ ಯಶಸ್ವಿನಿಯ ಮೈಬಣ್ಣ ಹಾಗೂ ಉಡುಪು ಕುರಿತು ಅವಮಾನಕಾರಿ ಟೀಕೆ ನಡೆಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ ಆರೋಗ್ಯ ಸಮಸ್ಯೆಯಿಂದ ಒಂದು ದಿನ ರಜೆ ಪಡೆದಿದ್ದಕ್ಕೆ ಸೆಮಿನಾರ್ ಹಾಗೂ ರೆಡಿಯಾಲಜಿ ಕೇಸ್ ನೀಡದೆ ನಿಂದನೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಯಶಸ್ವಿನಿ ಸಾವಿಗೆ ನ್ಯಾಯ ಒದಗಿಸಬೇಕೆಂದು ಸಹಪಾಠಿಗಳು ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

What's Your Reaction?

Like Like 1
Dislike Dislike 4
Love Love 1
Funny Funny 2
Angry Angry 4
Sad Sad 4
Wow Wow 0