ಸುಂಟಿಕೊಪ್ಪ : ಜೆಸಿಐ ವತಿಯಿಂದ ಚರ್ಮ, ಕೂದಲು ಕುರಿತ ಆರೋಗ್ಯ ತಪಾಸಣಾ ಶಿಬಿರ

ಸುಂಟಿಕೊಪ್ಪ : ಜೆಸಿಐ ವತಿಯಿಂದ ಚರ್ಮ, ಕೂದಲು ಕುರಿತ ಆರೋಗ್ಯ ತಪಾಸಣಾ ಶಿಬಿರ

ಸುಂಟಿಕೊಪ್ಪ: ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಕುಶಾಲನಗರದ ಜೀವ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಸಹಯೋಗದೊಂದಿಗೆ ಭಾನುವಾರ ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂದಿರದಲ್ಲಿ ಉಚಿತ ಚರ್ಮರೋಗ ಮತ್ತು ಕೂದಲು ಚಿಕಿತ್ಸಾ‌ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಕುಶಾಲನಗರದ ವೈದ್ಯೆ ಡಾ ಎಸ್.ಪಿ. ವರ್ಷ ಕರುಣ್, ಶಿಬಿರಾರ್ಥಿಗಳಿಗೆ ಚರ್ಮರೋಗ ಮತ್ತು ಕೂದಲು ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

ಸೋರಿಯಾಸಿಸ್, ಗಜಕರ್ಣ, ಅಲರ್ಜಿ,ಬಂಗು, ತೊನ್ನು, ಮುಖದ ಕಲೆ,ಉಗುರಿನ ಸಮಸ್ಯೆ, ಮೊಡವೆ ಚಿಕಿತ್ಸೆ, ಮಚ್ಚೆ , ಕೂದಲು ಉದುರುವಿಕೆ ಇತ್ಯಾದಿ ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ವೈದ್ಯರು ತಪಾಸಣೆ ನಡೆಸಿದರು. ಶಿಬಿರದಲ್ಲಿ 78 ಮಂದಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.

ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದ ವೈದ್ಯರಾದ ಡಾ ವರ್ಷ ಕರುಣ್, ಜನರು ತಮ್ಮ ಆರೋಗ್ಯ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜನರು ತಮ್ಮ ಆರೋಗ್ಯದ ಜತೆಗೆ ಚರ್ಮ ಮತ್ತು ಕೂದಲು ರಕ್ಷಣೆ ಕಡೆಗೂ ಗಮನಹರಿಸಬೇಕು ಎಂದರು. ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳಿಗೆ ಉತ್ತಮ ಪ್ರೋಟಿನ್ ಯುಕ್ತ ಆಹಾರ ಪದ್ಧತಿ ಕೂಡ ಮುಖ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಪರ್ಲಕೋಟಿ ನಂದಕುಮಾರ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನರು ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

 ಜೆಸಿಐ ಸಂಸ್ಥೆಯ ಪೂರ್ವ ವಲಯ ಅಧ್ಯಕ್ಷ ದೇವಿಪ್ರಸಾದ್ ಕಾಯರ್ ಮಾರ್, ವಲಯ ಸಂಯೋಜಕ ಬಿ.ಕೆ.ಸತೀಶ್ ಕುಮಾರ್, ಜೆಸಿಐ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ಎಂ.ಸಂಪತ್ ಕುಮಾರ್, ಟಿ.ಜಿ.ಪ್ರೇಮಕುಮಾರ್, ಡೆನಿಸ್ ಡಿ'ಸೋಜ, ಮನು ಅಚ್ಚಮ್ಮಯ್ಯ, ಪ್ರೀತಂ ಪ್ರಭಾಕರ್, ಫೆಲ್ಸಿ ಡೆನಿಸ್, ಝಾಯ್ದ್ ಅಹ್ಮದ್, ಜೇಸೀ ಸದಸ್ಯರಾದ ಎಚ್.ಮಂಜುನಾಥ್, ಜಯಪ್ರಕಾಶ್, ನಿಶಾಂತ್, ಇತರರು ಇದ್ದರು.